March 2, 2026
Monday, March 2, 2026
spot_img

ನಡುಸಮುದ್ರದಲ್ಲಿ ಇರಾನ್ ಭೀಕರ ಡ್ರೋನ್ ದಾಳಿ: ತೈಲ ಟ್ಯಾಂಕರ್ ಸ್ಫೋಟ, ಭಾರತೀಯ ಸಿಬ್ಬಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮತ್ತು ಇಸ್ರೇಲ್ ನಡುವಿನ ದೀರ್ಘಕಾಲದ ಹಗೆತನವು ಈಗ ಭಾರತೀಯರಿಗೂ ಕಂಟಕವಾಗಿ ಪರಿಣಮಿಸಿದೆ. ಒಮನ್ ಕರಾವಳಿಯ ನಡುಸಮುದ್ರದಲ್ಲಿ ಸಾಗುತ್ತಿದ್ದ ತೈಲ ಟ್ಯಾಂಕರ್ ಮೇಲೆ ಇರಾನ್ ನಡೆಸಿದ ‘ಮಾನವರಹಿತ ಡ್ರೋನ್’ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದು ಇರಾನ್-ಇಸ್ರೇಲ್ ನಡುವಿನ ಪ್ರಸ್ತುತ ಸಂಘರ್ಷದಲ್ಲಿ ಸಂಭವಿಸಿದ ಮೊದಲ ಭಾರತೀಯ ಸಾವು ಎಂದು ವರದಿಯಾಗಿದೆ.

ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಸ್ಫೋಟಕಗಳನ್ನು ಹೊತ್ತಿದ್ದ ಡ್ರೋನ್ ಹಡಗಿನ ಮುಖ್ಯ ಎಂಜಿನ್ ಕೋಣೆಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಸ್ಫೋಟದ ತೀವ್ರತೆಗೆ ಹಡಗಿನಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿತು. ದಾಳಿಗೊಳಗಾದ ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದರು, ಅವರಲ್ಲಿ 16 ಭಾರತೀಯರು, ನಾಲ್ವರು ಬಾಂಗ್ಲಾದೇಶಿಯರು ಹಾಗೂ ಒಬ್ಬ ಉಕ್ರೇನಿಯನ್ ಪ್ರಜೆ ಇದ್ದರು. ದುರದೃಷ್ಟವಶಾತ್, ಈ ದಾಳಿಯಲ್ಲಿ ಎಂಜಿನ್ ಕೋಣೆಯಲ್ಲಿದ್ದ ಭಾರತೀಯ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಹಡಗಿನಲ್ಲಿದ್ದ ಉಳಿದ ಎಲ್ಲಾ ಸಿಬ್ಬಂದಿಯನ್ನು ತುರ್ತಾಗಿ ಸ್ಥಳಾಂತರಿಸಲಾಯಿತು. ಸಮೀಪದಲ್ಲೇ ಇದ್ದ ಪನಾಮ ಧ್ವಜ ಹೊತ್ತ ವ್ಯಾಪಾರಿ ಹಡಗಿನ ಮೂಲಕ ಇವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಸರಕು ಹಡಗುಗಳ ಮೇಲೆ ನಡೆಯುತ್ತಿರುವ ಎರಡನೇ ದೊಡ್ಡ ದಾಳಿ ಇದಾಗಿದೆ. ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಅಂತರಾಷ್ಟ್ರೀಯ ಹಡಗು ಸಂಚಾರದ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !