ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ತಾರೆಯರು ಪಾಪರಾಜಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಕೆಲ ಪಾಪರಾಜಿಗಳು ನಟಿಯರು ವಿಡಿಯೋಗಳನ್ನು ಚಿತ್ರೀಕರಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ನಟಿಯರ ದೇಹವನ್ನು ಅನಾವಶ್ಯಕವಾಗಿ ಜೂಮ್ ಮಾಡಿ, ವಿಡಿಯೋ ಚಿತ್ರೀಕರಿಸುವಂತಹ ಈ ಬೆಳವಣಿಗೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ.
ಈ ವರ್ತನೆಯ ವಿರುದ್ಧ ಸಪ್ತಮಿ ಗೌಡ , ಯುವ ರಾಜ್ಕುಮಾರ್, ರಮ್ಯಾ ದಿವ್ಯ ಸ್ಪಂದನಾ ಸೇರಿದಂತೆ ಹಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಪ್ತಮಿ ಗೌಡ ಪೋಸ್ಟ್
ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಯಿಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ ಎಂದು ಸಪ್ತಮಿ ಗೌಡ ಕಿಡಿಕಾರಿದ್ದಾರೆ.
ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯಕೋನಗಳಿಂದ ಬಳಸುವುದು ನಮ್ಮಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ ಎಂದು ಸಪ್ತಮಿ ಗೌಡ ಬರೆದುಕೊಂಡಿದ್ದಾರೆ.
ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರಿಯುತ್ತದೆ’ ಎಂದು ಕಲಾವಿದರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಧ್ವನಿ ಎತ್ತಿದ್ದಾರೆ.
ಸಪ್ತಮಿ ಗೌಡ ಅವರ ಈ ಪೋಸ್ಟ್‌ಗೆ ಸ್ಯಾಂಡಲ್‌ವುಡ್‌ನಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಮ್ಯಾ, ರಕ್ಷಿತಾ ಪ್ರೇಮ್, ರಿತನ್ಯಾ ವಿಜಯ್‌ಕುಮಾರ್, ಮೇಘನಾ ರಾಜ್. ಅಮೃತಾ ಪ್ರೇಮ್, ಕಾಜಲ್ ಕುಂದರ್, ವಾಸುಕಿ ವೈಭವ್, ಸಂಚಿತ್ ಸಂಜೀವ್, ರೀಷ್ಮಾ ನಾಣಯ್ಯ, ಅಪೂರ್ವ, ರೋಶಿನಿ ಪ್ರಕಾಶ್ ಮುಂತಾದವರು ಬೆಂಬಲ ನೀಡಿದ್ದಾರೆ.



