ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ರಿಲೀಸ್ ಡೇಟ್ ಅದಲು-ಬದಲಾಗುತ್ತಿದೆ. ಇದರ ಲಾಭ ಪಡೆದಿರುವ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ತಮ್ಮ ಬಹುನಿರೀಕ್ಷಿತ ‘ಲವ್ ಮಾಕ್ಟೇಲ್-3’ ಸಿನಿಮಾವನ್ನು ನಿಗದಿತ ಸಮಯಕ್ಕಿಂತ ಮೊದಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಬದಲಾದ ಬಿಡುಗಡೆ ದಿನಾಂಕ:
ಹಳೆಯ ದಿನಾಂಕ: ಏಪ್ರಿಲ್ 10
ಹೊಸ ದಿನಾಂಕ: ಮಾರ್ಚ್ 19
ಈ ಮೊದಲು ಫೆಬ್ರವರಿ 23ಕ್ಕೆ ಬರಬೇಕಿದ್ದ ಸಿನಿಮಾ, ಇತರೆ ಚಿತ್ರಗಳ ಪೈಪೋಟಿಯಿಂದಾಗಿ ಏಪ್ರಿಲ್‌ಗೆ ಮುಂದೂಡಲ್ಪಟ್ಟಿತ್ತು. ಅಲ್ಲದೆ, ಮಾರ್ಚ್‌ನಲ್ಲಿ ‘ಟಾಕ್ಸಿಕ್’ ಅಬ್ಬರ ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ‘ಟಾಕ್ಸಿಕ್’ ರೇಸ್‌ನಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿರುವುದರಿಂದ, ಆ ಖಾಲಿ ಇರುವ ಜಾಗವನ್ನು ತುಂಬಲು ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ.
“ನಿಮ್ಮನ್ನು ರಂಜಿಸಲು ನಾವು ಅಂದುಕೊಂಡಿದ್ದಕ್ಕಿಂತ ಬೇಗ ಬರುತ್ತಿದ್ದೇವೆ” ಎಂದು ಕೃಷ್ಣ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
‘ಲವ್ ಮಾಕ್ಟೇಲ್’ ಸರಣಿಯ ಈ ಮೂರನೇ ಭಾಗವು ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧದ ಮೇಲೆ ಬೆಳಕು ಚೆಲ್ಲಲಿದೆ. ಆದಿ ಮತ್ತು ನಿಧಿಯ ಪ್ರೇಮಕಥೆಯ ನಂತರ, ಈ ಹೊಸ ಆಯಾಮ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.



