ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಮುಂದಿನ ಕೆಲಕಾಲ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಸುಮಾರು 18 ತಿಂಗಳ ಕಾಲ ಅವರು ಭಾರತದ ದ್ವಿಪಕ್ಷೀಯ ಟಿ20 ಸರಣಿಗಳಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗಿದ್ದು, ತಮ್ಮ ಫಿಟ್‌ನೆಸ್ ಹಾಗೂ ಕೆಲಸದ ಒತ್ತಡವನ್ನು ಸಮತೋಲನದಲ್ಲಿಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
2024ರ ಟಿ20 ವಿಶ್ವಕಪ್ ನಂತರ ಬುಮ್ರಾ ನಿರಂತರವಾಗಿ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ 2026ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಮುಂದಿನ ಪ್ರಮುಖ ಗುರಿ 2027ರ ಏಕದಿನ ವಿಶ್ವಕಪ್ ಆಗಿರುವುದರಿಂದ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಹೆಚ್ಚಿನ ಗಮನ ಹರಿಸಲು ಅವರು ನಿರ್ಧರಿಸಿದ್ದಾರೆ.
ಇದನ್ನೂ ಓದಿ:
ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧರಾಗುವ ಉದ್ದೇಶದಿಂದ ಬುಮ್ರಾ ತಮ್ಮ ಕಾರ್ಯಭಾರವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದ್ದಾರೆ. ಆದರೆ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಿಲ್ಲ ಎಂದು ತಿಳಿದುಬಂದಿದೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿದರೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬುಮ್ರಾ ಆಡಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಅವರು ಮುಂದಿನ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಅಗತ್ಯ ಸಮಯದ ಬಳಿಕ ಅವರು ಮತ್ತೆ ಟಿ20 ತಂಡಕ್ಕೆ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.



