ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಮಹತ್ವದ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪ್ರಸ್ತುತ ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನ ಮೂಲಗಳು ಪಳೆಯುಳಿಕೆ ಇಂಧನ ಮೂಲಗಳನ್ನು ಮೀರಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಜನವರಿ 31ರ ವೇಳೆಗೆ ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 5,20,511 ಮೆಗಾವ್ಯಾಟ್‌ಗೆ ತಲುಪಿದೆ. ಇದರಲ್ಲಿ 2,48,542 ಮೆಗಾವ್ಯಾಟ್ ಪಳೆಯುಳಿಕೆ ಇಂಧನ ಮೂಲಗಳಿಂದ ಲಭ್ಯವಾಗುತ್ತಿದ್ದರೆ, 2,71,969 ಮೆಗಾವ್ಯಾಟ್ ಪಳೆಯುಳಿಕೆಯೇತರ ಮೂಲಗಳಿಂದ ಉತ್ಪಾದನೆಯಾಗುತ್ತಿದೆ. ಈ ಪೈಕಿ ನವೀಕರಿಸಬಹುದಾದ ಇಂಧನ ಮೂಲಗಳ ಪಾಲು 2,63,189 ಮೆಗಾವ್ಯಾಟ್ ಆಗಿದೆ.
ಇದನ್ನೂ ಓದಿ:
2025–26 ಆರ್ಥಿಕ ವರ್ಷದಲ್ಲಿ ಒಟ್ಟು 52,536.49 ಮೆಗಾವ್ಯಾಟ್ ಹೊಸ ವಿದ್ಯುತ್ ಸಾಮರ್ಥ್ಯ ಸೇರ್ಪಡೆಯಾಗಿದೆ. ಇದರಲ್ಲಿ 43,026.49 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನದಿಂದಲೇ ಬಂದಿದೆ. ವಿಶೇಷವಾಗಿ ಸೌರಶಕ್ತಿ ಕ್ಷೇತ್ರವೇ ಹೆಚ್ಚು ಬೆಳವಣಿಗೆ ಕಂಡಿದ್ದು, ಸುಮಾರು 34,955 ಮೆಗಾವ್ಯಾಟ್ ಸಾಮರ್ಥ್ಯ ಸೇರ್ಪಡೆಯಾಗಿದೆ. ಗಾಳಿ ವಿದ್ಯುತ್ 4,612 ಮೆಗಾವ್ಯಾಟ್ ಹಾಗೂ ಜಲ ವಿದ್ಯುತ್ 3,370 ಮೆಗಾವ್ಯಾಟ್ ಸೇರ್ಪಡೆಯಾಗಿದೆ.
ಇನ್ನು ಪಳೆಯುಳಿಕೆ ಇಂಧನದಲ್ಲಿ ಕಲ್ಲಿದ್ದಲು ಪ್ರಮುಖ ಮೂಲವಾಗಿದ್ದು, ಸುಮಾರು 2,21,210 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಗಾಳಿ, ಸೌರ ಮತ್ತು ಇತರ ಹಸಿರು ಶಕ್ತಿ ಮೂಲಗಳು ದೇಶದ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಸಚಿವರು ವಿವರಿಸಿದ್ದಾರೆ.



