March 15, 2026
Sunday, March 15, 2026
spot_img

ನೆತನ್ಯಾಹು ಸಾವಿನ ವದಂತಿ: ಬದುಕಿದ್ದರೆ ಹುಡುಕಿ ಕೊಲ್ಲುತ್ತೇವೆ ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಗ್ಗೆ ಹೊಸ ವಿವಾದ ಶುರುವಾಗಿದೆ. ಅವರು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದರ್ಭದಲ್ಲಿ ಇರಾನ್ ಕಠಿಣ ಎಚ್ಚರಿಕೆ ನೀಡಿದೆ.

ಇರಾನ್ ಭಾನುವಾರ ಹೇಳಿಕೆ ನೀಡಿದ್ದು, “ಮಕ್ಕಳನ್ನು ಕೊಲ್ಲುವ ಅಪರಾಧಿ ಬದುಕಿದ್ದರೆ, ನಾವು ಅವನನ್ನು ಸಂಪೂರ್ಣ ಶಕ್ತಿಯಿಂದ ಹುಡುಕಿ ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡಿವೆ. ಕೆಲವು ದಿನಗಳಿಂದ ನೆತನ್ಯಾಹು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ಸ್ಥಿತಿಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ:

ಮಾರ್ಚ್ 12ರಂದು ಬಿಡುಗಡೆಯಾದ ನೆತನ್ಯಾಹು ಅವರ ವಿಡಿಯೋದಲ್ಲೂ ವಿವಾದ ಎದ್ದಿದೆ. ಆ ವಿಡಿಯೋದಲ್ಲಿ ಅವರ ಕೈಯಲ್ಲಿ ಆರು ಬೆರಳುಗಳು ಕಾಣಿಸಿಕೊಂಡಿರುವಂತೆ ಕಾಣಿಸಿದ್ದು, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಲಾದ ವಿಡಿಯೋ ಇರಬಹುದು ಎಂಬ ಅನುಮಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಈ ನಡುವೆಯೇ ನೆತನ್ಯಾಹು ಅವರ ಕಚೇರಿ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಮಂತ್ರಿ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ. “ಸಾವಿನ ಕುರಿತು ಹರಿದಾಡುತ್ತಿರುವ ಎಲ್ಲಾ ಸುದ್ದಿಗಳು ಸುಳ್ಳು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ ನೆತನ್ಯಾಹು ಅವರ ಮಗ ಯಾಯಿರ್ ನೆತನ್ಯಾಹು ಕೂಡ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ ಎಂಬ ಮಾಹಿತಿ ಹೊರಬಂದಿದ್ದು, ಇದರಿಂದ ವದಂತಿಗಳಿಗೆ ಮತ್ತಷ್ಟು ಇಂಧನ ಸಿಕ್ಕಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !