May 2, 2026
Saturday, May 2, 2026
spot_img

ಮೈದಾನದಲ್ಲಿ ರನ್ ಮಳೆ, ರಸ್ತೆಯಲ್ಲಿ ಫೆರಾರಿ ಅಬ್ಬರ: ಪಾಂಡ್ಯ ಗ್ಯಾರೇಜ್‌ಗೆ ಬಂತು 12 ಕೋಟಿಯ ‘ಕಪ್ಪು ಸುಂದರಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತದ ಗೆಲುವಿನ ಶಿಲ್ಪಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈಗ ತಮ್ಮ ಐಷಾರಾಮಿ ಜೀವನಶೈಲಿಯಿಂದ ಸುದ್ದಿಯಲ್ಲಿದ್ದಾರೆ. ವಿಶ್ವಕಪ್ ಯಶಸ್ಸಿನ ಬೆನ್ನಲ್ಲೇ ಪಾಂಡ್ಯ ತಮ್ಮ ಕಾರುಗಳ ಸಂಗ್ರಹಕ್ಕೆ ಬರೋಬ್ಬರಿ 12 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ‘ಫೆರಾರಿ 12 ಸಿಲಿಂಡ್ರಿ’ ಕಾರನ್ನು ಸೇರಿಸಿಕೊಂಡಿದ್ದಾರೆ.

ಇತ್ತೀಚೆಗೆ ಈ ಕಪ್ಪು ಬಣ್ಣದ ಆಕರ್ಷಕ ಸೂಪರ್ ಕಾರ್‌ನಲ್ಲಿ ಹಾರ್ದಿಕ್ ಅವರು ಗೆಳತಿ ಮಹೀಕಾ ಶರ್ಮಾ ಜೊತೆ ಮುಂಬೈ ರಸ್ತೆಯಲ್ಲಿ ರೌಂಡ್ಸ್ ಹಾಕುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಈಗಾಗಲೇ ಪಾಂಡ್ಯ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ ಇವಿಒ, ಲಂಬೋರ್ಘಿನಿ ಉರಸ್, ಮರ್ಸಿಡಿಸ್-ಎಎಂಜಿ ಜಿ63 ಮತ್ತು ರೇಂಜ್ ರೋವರ್ ವೋಗ್‌ನಂತಹ ವಿಶ್ವದ ಪ್ರತಿಷ್ಠಿತ ಕಾರುಗಳಿದ್ದು, ಈಗ ಫೆರಾರಿ ಈ ಪಟ್ಟಿಗೆ ಹೊಸ ಮೆರುಗು ನೀಡಿದೆ.

32 ವರ್ಷದ ಹಾರ್ದಿಕ್ ಪಾಂಡ್ಯ ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದರು.

ಬ್ಯಾಟಿಂಗ್: 9 ಇನ್ನಿಂಗ್ಸ್‌ಗಳಲ್ಲಿ 160.74 ಸ್ಟ್ರೈಕ್ ರೇಟ್‌ನಲ್ಲಿ 217 ರನ್ (2 ಅರ್ಧಶತಕ).

ಬೌಲಿಂಗ್: ನಿರ್ಣಾಯಕ ಸಂದರ್ಭಗಳಲ್ಲಿ 9 ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.

ಈ ಅದ್ಭುತ ಪ್ರದರ್ಶನದ ಫಲವಾಗಿ ಐಸಿಸಿ ಆಲ್‌ರೌಂಡರ್ ಶ್ರೇಯಾಂಕದಲ್ಲಿ ಪಾಂಡ್ಯ 299 ರೇಟಿಂಗ್ ಪಾಯಿಂಟ್ಸ್ ಪಡೆಯುವ ಮೂಲಕ ವಿಶ್ವದ 2ನೇ ಶ್ರೇಷ್ಠ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಮೈದಾನದಲ್ಲಿ ಎದುರಾಳಿಗಳ ಬೆವರಿಳಿಸುವ ಪಾಂಡ್ಯ, ಈಗ ರಸ್ತೆಯಲ್ಲಿ ಫೆರಾರಿ ವೇಗದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !