October 22, 2026
Thursday, October 22, 2026
spot_img

ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣ: 4 ಆರೋಪಿಗಳ ಪೊಲೀಸ್ ಕಸ್ಟಡಿ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಮುಂಬೈ ನ್ಯಾಯಾಲಯವು ಅಕ್ಟೋಬರ್ 26ರವರೆಗೆ ವಿಸ್ತರಿಸಿದೆ.

ಇದೇ ವೇಳೆ, ಈ ಇಡೀ ದಾಳಿಯ ಹಿಂದಿರುವ ಪ್ರಮುಖ ಸೂತ್ರಧಾರಿ ಎನ್ನಲಾದ ಅನಿಲ್ ಪಂಡಿತ್ ಎಂಬಾತ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೋರ್ಟ್‌ನಲ್ಲಿ ನಡೆದಿದ್ದೇನು?

ರಾಜಸ್ಥಾನದ ಕೋಟಾದಿಂದ ಬಂಧಿಸಿ ಮುಂಬೈಗೆ ಕರೆತರಲಾಗಿದ್ದ ನಾಲ್ವರು ಆರೋಪಿಗಳನ್ನು ವೈದ್ಯಕೀಯ ತಪಾಸಣೆಯ ನಂತರ ಮುಂಬೈನ ಇಸ್ಪ್ಲನೇಡ್ ನ್ಯಾಯಾಲಯಕ್ಕೆ (ಕಿಲ್ಲಾ ಕೋರ್ಟ್) ಹಾಜರುಪಡಿಸಲಾಯಿತು. ಪೊಲೀಸರು ಅಕ್ಟೋಬರ್ 31ರವರೆಗೆ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಆರೋಪಿಗಳ ಪರ ವಕೀಲ ಅಜಿಂಕ್ಯ ಮಿರ್ಗಲ್ ಮಧುಕರ್ ಅವರು ವಾದ ಮಂಡಿಸಿ, ಆರೋಪಿಗಳು ಆಯುಧ ಪೂರೈಕೆ ಮಾಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ, ಆದರೆ ಅದು ಯಾವ ರೀತಿಯ ಪಿಸ್ತೂಲ್ ಎಂಬ ಕನಿಷ್ಠ ವಿವರಗಳೂ ರಿಮಾಂಡ್ ವರದಿಯಲ್ಲಿಲ್ಲ. ಅಲ್ಲದೆ ಮೊಬೈಲ್ ಡೇಟಾ ಪಡೆಯಲು ಆರೋಪಿಗಳನ್ನು ಭೌತಿಕವಾಗಿ ಕಸ್ಟಡಿಯಲ್ಲಿಡುವ ಅಗತ್ಯವಿಲ್ಲ ಎಂದು ಆಕ್ಷೇಪಿಸಿದರು. ಪ್ರತಿ ವಾದ ಆಲಿಸಿದ ನ್ಯಾಯಾಧೀಶರು ಅಕ್ಟೋಬರ್ 26ರವರೆಗೆ ಮಾತ್ರ ಪೊಲೀಸ್ ಕಸ್ಟಡಿ ಮಂಜೂರು ಮಾಡಿದರು.

ಹರಿಯಾಣದಲ್ಲೂ ಮುಂದುವರಿದ ಬಂಧನ ಬೇಟೆ

ಈ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಹರಿಯಾಣದಲ್ಲಿ ಕಾರ್ಯಾಚರಣೆ ನಡೆಸಿ ಮತ್ತೊಂದು ಜಾಲದ 7 ಮಂದಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಸದ್ಯ ಒಟ್ಟು 10 ಜನರನ್ನು ಪೊಲೀಸರು ವಶಕ್ಕೆ ಪಡೆದಂತಾಗಿದೆ. ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಅನಿಲ್ ಪಂಡಿತ್ ಸೂಚನೆಯ ಮೇರೆಗೆ ಈ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅಕ್ಟೋಬರ್ 18ರಂದು ನಡೆದಿದ್ದ ಘಟನೆ

ಅಕ್ಟೋಬರ್ 18ರ ಭಾನುವಾರ ಸಂಜೆ ಸುಮಾರು 7 ಗಂಟೆಗೆ ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರು ಫುಟ್‌ಬಾಲ್ ಕ್ಲಬ್‌ನಿಂದ ಹೊರಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು, ಆದರೆ ಅವರ ಕಾರು ಚಾಲಕನಿಗೆ ಗಾಯಗಳಾಗಿದ್ದವು.

ಇದನ್ನೂ ಓದಿ:

ನಕಲಿ ವಿಡಿಯೋಗಳ ವಿರುದ್ಧ ಕಿಡಿಕಾರಿದ ಟೈಗರ್ ತಂಡ

ಈ ಘಟನೆಯ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿರುವ ನಕಲಿ ವಿಡಿಯೋಗಳ ವಿರುದ್ಧ ಟೈಗರ್ ಶ್ರಾಫ್ ಅವರ ಅಧಿಕೃತ ತಂಡ ತೀವ್ರ ಎಚ್ಚರಿಕೆ ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ ನಟ ಟೈಗರ್ ಯಾವುದೇ ಅಧಿಕೃತ ಹೇಳಿಕೆ ಅಥವಾ ವಿಡಿಯೋ ಬಿಡುಗಡೆ ಮಾಡಿಲ್ಲ. ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾ ಪುಟಗಳು ಮಾಹಿತಿ ಖಚಿತಪಡಿಸಿಕೊಳ್ಳದೆ ಇಂತಹ ನಕಲಿ ಕಂಟೆಂಟ್ ಹರಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಂಡ ಸ್ಪಷ್ಟಪಡಿಸಿದೆ.

Must Read

Skip to toolbar