March 19, 2026
Thursday, March 19, 2026
spot_img

ಜಾಗತಿಕ ತೈಲ ಪೂರೈಕೆ ಮೇಲೆ ಇರಾನ್ ಹಿಡಿತ: ಸಮುದ್ರ ಮಾರ್ಗದಲ್ಲೂ ಶುರುವಾಗಲಿದೆ ‘ಟೋಲ್’ ದರ್ಬಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇಸ್ರೇಲ್‌ನ ಬೆದರಿಕೆಗಳಿಗೆ ಪ್ರತಿಯಾಗಿ ಇರಾನ್ ಈಗ ವಿಶ್ವದ ಅತ್ಯಂತ ಪ್ರಮುಖ ಜಲಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಲು ಮುಂದಾಗಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಇರಾನ್ ಇದನ್ನು ತನ್ನ ಹೊಸ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲು ಯೋಜಿಸಿದೆ.

ಪರ್ಷಿಯನ್ ಗಲ್ಫ್ ಮತ್ತು ಅರಬ್ಬಿ ಸಮುದ್ರವನ್ನು ಸಂಪರ್ಕಿಸುವ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಪ್ರತಿ ಹಡಗಿಗೂ ಇನ್ನು ಮುಂದೆ ಸಾಗಣೆ ಅನುಮತಿ ಶುಲ್ಕ ಅಥವಾ ಟೋಲ್ ವಿಧಿಸುವ ಪ್ರಸ್ತಾವನೆಯನ್ನು ಇರಾನ್ ಗಂಭೀರವಾಗಿ ಪರಿಗಣಿಸುತ್ತಿದೆ. ತೈಲ, ಗ್ಯಾಸ್ ಮಾತ್ರವಲ್ಲದೆ ಆಹಾರ ಪದಾರ್ಥ ಹೊತ್ತೊಯ್ಯುವ ಹಡಗುಗಳೂ ಇರಾನ್ ಸರ್ಕಾರದ ಮಸೂದೆಯ ಅನ್ವಯ ತೆರಿಗೆ ಪಾವತಿಸಬೇಕಾಗುತ್ತದೆ. ತನ್ನ ಮೇಲೆ ಆರ್ಥಿಕ ನಿಷೇಧ ಹೇರಿರುವ ದೇಶಗಳಿಗೆ ಸಮುದ್ರದ ಹಾದಿಯಲ್ಲೇ ಪಾಠ ಕಲಿಸಲು ಇರಾನ್ ಈ ತಂತ್ರ ಹೂಡಿದೆ.

ವಿಶ್ವದ ಒಟ್ಟು ತೈಲ ಮತ್ತು ಅನಿಲದ ಶೇ. 20 ಕ್ಕಿಂತ ಹೆಚ್ಚು ಭಾಗ ಈ ಕಿರಿದಾದ ಮಾರ್ಗದ ಮೂಲಕವೇ ಸಾಗಣೆಯಾಗುತ್ತದೆ. ಪ್ರತಿದಿನ ಸುಮಾರು 100 ರಿಂದ 135 ಹಡಗುಗಳು ಇಲ್ಲಿ ಹಾದು ಹೋಗುತ್ತವೆ, ಇದರಲ್ಲಿ 20ಕ್ಕೂ ಹೆಚ್ಚು ಬೃಹತ್ ತೈಲ ಟ್ಯಾಂಕರ್‌ಗಳಿರುತ್ತವೆ.

ಸೌದಿ ಅರೇಬಿಯಾ, ಕತಾರ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ರಫ್ತು ಈ ಮಾರ್ಗದ ಮೇಲೆ ನಿಂತಿದೆ. ಏಷ್ಯಾದ ಬಹುತೇಕ ರಾಷ್ಟ್ರಗಳು ತಮ್ಮ ಇಂಧನ ಅಗತ್ಯಕ್ಕೆ ಇದನ್ನೇ ಅವಲಂಬಿಸಿವೆ.

ಕೇವಲ 33 ಕಿಮೀ ಅಗಲವಿರುವ ಈ ಜಲಸಂಧಿಯನ್ನು ಇರಾನ್ ಮತ್ತು ಓಮನ್ ನಿಯಂತ್ರಿಸುತ್ತವೆ. ಪ್ರಸ್ತುತ ಯುದ್ಧದ ಬಿಕ್ಕಟ್ಟಿನಿಂದಾಗಿ ಈಗಾಗಲೇ ಸಾವಿರಕ್ಕೂ ಹೆಚ್ಚು ಹಡಗುಗಳು ಇಲ್ಲಿ ಸ್ಥಗಿತಗೊಂಡಿವೆ. ಇರಾನ್‌ನ ಈ ಹೊಸ ನಿಯಮ ಜಾರಿಯಾದಲ್ಲಿ, ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !