ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಘೋಷಣೆ ಮಾಡಿದ್ದು , ಈ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು 625ಕ್ಕೆ ಬದಲಾಗಿ 525ಕ್ಕೆ ನಿಗದಿ ಮಾಡಲು ನಿರ್ಧರಿಸಿದೆ.
ಈ ಕುರಿತು ಇಂದು ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಈ ವರ್ಷದಿಂದಲೇ ಅಂಕವನ್ನು 625 ರಿಂದ 525ಕ್ಕೆ ಇಳಿಕೆ ಮಾಡಲಾಗಿದೆ ತಿಳಿಸಿದರು.
ಈ ಹಿಂದೆ ಪರೀಕ್ಷೆಗಳು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಇನ್ಮುಂದೆ ತೃತೀಯ ಭಾಷೆ ಪರೀಕ್ಷೆಯ 100 ಅಂಕಗಳನ್ನು ಹೊರಗಿಡಲಾಗಿದ್ದು, ಬದಲಾಗಿ ಗ್ರೇಡ್ ಮೂಲಕ ನೀಡಲಾಗುತ್ತದೆ. ಹೀಗಾಗಿ ಇನ್ನು 525 ಅಂಕಗಳ ಮೇಲೆ ಮಾತ್ರ ಫಲಿತಾಂಶ ಪರಿಗಣನೆಯಾಗಲಿದೆ ಎಂದು ತಿಳಿಸಿದರು.



