ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪಂಢರಪುರದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಆರೋಪೊಂದು ಕೇಳಿಬಂದಿದ್ದು, ಬಾಲಕನ ಬಲಗೈಗೆ ಮಾಡಬೇಕಿದ್ದ ಶಸ್ತ್ರಚಿಕಿತ್ಸೆಯನ್ನು ವೈದ್ಯರು ತಪ್ಪಾಗಿ ಎಡಗೈಗೆ ನಡೆಸಿದ ಘಟನೆ ನಡೆದಿದೆ. ಈ ವೇಳೆ ತಪ್ಪು ಬೆರಳನ್ನು ತೆಗೆದುಹಾಕಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ಮಾಹಿತಿಯ ಪ್ರಕಾರ, ಬಾಲಕನು ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿ ಸಮಸ್ಯೆಯಿಂದ ಬಳಲುತ್ತಿದ್ದು, ಎರಡೂ ಕೈಗಳಲ್ಲಿ ಹೆಚ್ಚುವರಿ ಕಿರುಬೆರಳುಗಳಿದ್ದವು. ಆದರೆ ಬಲಗೈಯೊಂದರಲ್ಲಿ ಮಾತ್ರ ನೋವು ಮತ್ತು ಬಿಗಿತ ಹೆಚ್ಚಾಗಿ ಕಂಡುಬಂದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಸಲಹೆ ನೀಡಿದ್ದರು. ಅದರಂತೆ ಕುಟುಂಬವು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಕುಟುಂಬದ ಆರೋಪದಂತೆ, ಬಲಗೈಗೆ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಸ್ಪಷ್ಟ ಅನುಮತಿ ಪತ್ರ (NOC) ಮೇಲೂ ಸಹಿ ಮಾಡಲಾಗಿತ್ತು. ಆದರೂ ವೈದ್ಯರು ಎಡಗೈಗೆ ಶಸ್ತ್ರಚಿಕಿತ್ಸೆ ನಡೆಸಿ ತಪ್ಪು ಬೆರಳನ್ನು ತೆಗೆದಿದ್ದಾರೆ. ಈ ವಿಷಯ ಗಮನಕ್ಕೆ ಬಂದ ತಕ್ಷಣ ಕುಟುಂಬವು ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದೆ.
ಇದನ್ನೂ ಓದಿ:
ಇತ್ತ ಆಸ್ಪತ್ರೆ ಆಡಳಿತವು ಮಗುವಿನ ಎರಡೂ ಕೈಗಳಲ್ಲೂ ಸಮಸ್ಯೆ ಇದ್ದುದಾಗಿ ಹೇಳಿ ಕ್ರಮವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಎಡಗೈಯಲ್ಲಿ ಯಾವುದೇ ತೊಂದರೆ ಇರಲಿಲ್ಲ ಎಂದು ಕುಟುಂಬ ಪುನರುಚ್ಚರಿಸಿದೆ.
ಘಟನೆಗೆ ಸಂಬಂಧಿಸಿ ಆರೋಗ್ಯ ಇಲಾಖೆ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದು, ಪ್ರಕರಣದ ಸಂಪೂರ್ಣ ವಿವರಗಳನ್ನು ಪರಿಶೀಲಿಸಲು ಮುಂದಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬ ಒತ್ತಾಯಿಸಿದೆ.



