ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕಲಾ ಲೋಕದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಖ್ಯಾತ ಚಿತ್ರಕಾರ ರಾಜಾ ರವಿ ವರ್ಮಾ ಅವರ ಪ್ರಸಿದ್ಧ ‘ಯಶೋದಾ ಮತ್ತು ಕೃಷ್ಣ’ ಚಿತ್ರಕಲೆ ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದೆ.
ಕೈಗಾರಿಕೋದ್ಯಮಿ ಸೈರಸ್ ಪೂನಾವಾಲಾ ಈ ಅಪರೂಪದ ಆಯಿಲ್ ಪೇಂಟಿಂಗ್ ಅನ್ನು ಬರೋಬ್ಬರಿ ₹167 ಕೋಟಿ ನೀಡಿ ಖರೀದಿಸಿದ್ದಾರೆ. ಇದು ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿ ಹೊಸ ದಾಖಲೆ ನಿರ್ಮಿಸಿದೆ.
1890ರ ದಶಕದಲ್ಲಿ ರಚಿಸಲಾದ ಈ ಚಿತ್ರದಲ್ಲಿ ಯಶೋದಾ ಮತ್ತು ಬಾಲಕೃಷ್ಣನ ಮಮತೆಯ ಬಂಧವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಯುರೋಪಿಯನ್ ಚಿತ್ರಕಲೆಯ ನೈಜ ಶೈಲಿಯನ್ನು ಭಾರತೀಯ ಪೌರಾಣಿಕ ಭಾವನೆಗಳೊಂದಿಗೆ ಮಿಶ್ರಣ ಮಾಡುವಲ್ಲಿ ರವಿ ವರ್ಮಾ ಅವರ ಕೌಶಲ್ಯ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:
ಈ ಕಲಾಕೃತಿ ₹80 ಕೋಟಿ ರಿಂದ ₹120 ಕೋಟಿ ನಡುವೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಂತಿಮವಾಗಿ ನಿರೀಕ್ಷೆಗಿಂತ ಎರಡು ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿರುವುದು ಕಲಾ ವಲಯದಲ್ಲಿ ಸಂಚಲನ ಮೂಡಿಸಿದೆ.
ದೆಹಲಿಯ ಹರಾಜು ಸಂಸ್ಥೆಯ ವಿಶೇಷ ಲೈವ್ ಸೇಲ್‌ನಲ್ಲಿ ಈ ಚಿತ್ರ ಹರಾಜಿಗೆ ಇಡಲಾಗಿತ್ತು. ಈ ಮಾರಾಟದೊಂದಿಗೆ ಭಾರತೀಯ ಕಲಾಕೃತಿಗಳ ಮೌಲ್ಯ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಕಲಾ ಪ್ರಿಯರು ಮತ್ತು ಸಂಗ್ರಾಹಕರಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.



