ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗೆ ಎರಡು ವಾರಗಳ ಕಾಲ ಕದನ ವಿರಾಮ ಘೋಷಿಸುತ್ತಿದ್ದಂತೆಯೇ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಉಂಟಾಗಿದೆ. ಯುದ್ಧದ ಭೀತಿಯಿಂದ ಗಗನಕ್ಕೇರಿದ್ದ ಕಚ್ಚಾ ತೈಲದ ಬೆಲೆಗಳು ಈಗ ಏಕಾಏಕಿ ಇಳಿಕೆಯಾಗಿದ್ದು, ಕಳೆದ ಆರು ವರ್ಷಗಳಲ್ಲೇ ಒಂದೇ ದಿನ ಕಂಡ ಅತಿ ದೊಡ್ಡ ಕುಸಿತಕ್ಕೆ ಸಾಕ್ಷಿಯಾಗಿದೆ.
ಕದನ ವಿರಾಮದ ಘೋಷಣೆಯಾದ ಬೆನ್ನಲ್ಲೇ ತೈಲ ದರಗಳು ಒಂದೇ ದಿನದಲ್ಲಿ ಶೇ. 13 ರಿಂದ ಶೇ. 17 ರಷ್ಟು ಇಳಿಕೆ ಕಂಡಿವೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ 16.13 ಡಾಲರ್ (14.3%) ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 96.82 ಡಾಲರ್ (ಅಂದಾಜು 8,940) ತಲುಪಿದೆ.
ಜಾಗತಿಕ ಮಾನದಂಡವಾದ ಒಪೆಕ್ ದೇಶಗಳ ಬ್ರೆಂಟ್ ಕಚ್ಚಾ ತೈಲದ ದರ 14.84 ಡಾಲರ್ (13.6%) ಕುಸಿದು, ಪ್ರತಿ ಬ್ಯಾರೆಲ್‌ಗೆ 94.43 ಡಾಲರ್‌ಗೆ (ಅಂದಾಜು 8,720) ಇಳಿಕೆಯಾಗಿದೆ.
ಹರ್ಮಜ್ ಜಲಸಂಧಿಯನ್ನು ಮುಕ್ತಗೊಳಿಸಲು ಮತ್ತು ಶಾಂತಿ ಮಾತುಕತೆ ನಡೆಸಲು ಇರಾನ್ ಒಪ್ಪಿಕೊಂಡಿರುವುದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. ಪೂರೈಕೆಯಲ್ಲಿನ ಅಡೆತಡೆಗಳು ನಿವಾರಣೆಯಾಗಲಿವೆ ಎಂಬ ಆಶಾವಾದದಿಂದಾಗಿ ಮಾರುಕಟ್ಟೆಯಲ್ಲಿ ತೈಲದ ಬೆಲೆಗಳು ವೇಗವಾಗಿ ಕೆಳಗಿಳಿಯುತ್ತಿವೆ. ಈ ಬೆಳವಣಿಗೆಯಿಂದಾಗಿ ಮುಂಬರುವ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅಗ್ಗವಾಗುವ ಸಾಧ್ಯತೆ ಇದೆ.



