April 8, 2026
Wednesday, April 8, 2026
spot_img

ಮಧ್ಯಪ್ರಾಚ್ಯದಲ್ಲಿ ‘ಶಾಂತಿ’ ಮಂತ್ರ: ಟ್ರಂಪ್ ರಣತಂತ್ರ ಬದಲಿಸಿದ್ದೇಗೆ? ವಿರಾಮದ ಹಿಂದೆ ಅಡಗಿದೆಯೇ ರಾಜತಾಂತ್ರಿಕ ಗೇಮ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ 39 ದಿನಗಳಿಂದ ಜಗತ್ತನ್ನು ಮೂರನೇ ಮಹಾಯುದ್ಧದ ಭೀತಿಯಲ್ಲಿ ಇರಿಸಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಈಗ ತಾತ್ಕಾಲಿಕ ವಿರಾಮ ಸಿಕ್ಕಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಗಡುವು ಮುಗಿಯುವ ಮುನ್ನವೇ, ಎರಡು ವಾರಗಳ ಕಾಲ ‘ದ್ವಿಪಕ್ಷೀಯ ಕದನ ವಿರಾಮ’ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯುದ್ಧದ ಮೋಡಗಳು ಸದ್ಯಕ್ಕೆ ಸರಿದಿವೆ.

ವಿಶೇಷವೆಂದರೆ, ಈ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಾತ್ರವೂ ಚರ್ಚೆಯಾಗುತ್ತಿದೆ. ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಉಭಯ ದೇಶಗಳು ಸಂಯಮ ವಹಿಸುವಂತೆ ಮಾಡಿದ ಮನವಿಯ ಬೆನ್ನಲ್ಲೇ ರಾಜತಾಂತ್ರಿಕ ಸಂಧಾನಗಳು ಚುರುಕುಗೊಂಡವು ಎನ್ನಲಾಗಿದೆ.

ಇರಾನ್ ಮೇಲೆ ತೀವ್ರ ದಾಳಿಯ ಎಚ್ಚರಿಕೆ ನೀಡಿದ್ದ ಟ್ರಂಪ್ ಒಂದು ಹೆಜ್ಜೆ ಹಿಂದೆ ಸರಿಯಲು ಮುಖ್ಯ ಕಾರಣ ‘ಹಾರ್ಮುಜ್ ಜಲಸಂಧಿ’. ವಿಶ್ವದ ಒಟ್ಟು ತೈಲ ಪೂರೈಕೆಯ ಶೇ. 20ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುತ್ತದೆ. ಇರಾನ್ ಇದನ್ನು ಬಂದ್ ಮಾಡಿದ್ದರಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈಗ ಈ ಜಲಸಂಧಿಯನ್ನು “ಸಂಪೂರ್ಣ ಮತ್ತು ಸುರಕ್ಷಿತವಾಗಿ” ತೆರೆಯಲು ಇರಾನ್ ಒಪ್ಪಿಕೊಂಡಿರುವುದು ಟ್ರಂಪ್ ಅವರಿಗೆ ಸಂದ ಜಯ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ಪ್ರಬಲ ಅಸ್ತ್ರವಾಗಿ ಬಳಸಿತ್ತು. ಹಡಗುಗಳ ಸಂಚಾರಕ್ಕೆ 2 ಮಿಲಿಯನ್ ಡಾಲರ್ ಸುಂಕ ವಿಧಿಸುತ್ತಿದ್ದ ಇರಾನ್‌ನ ಈ ಕ್ರಮವನ್ನು “ಆಯತೊಲ್ಲಾ ಬೂತ್” ಎಂದು ಲಾಯ್ಡ್ಸ್ ಲಿಸ್ಟ್ ವರದಿ ಕರೆದಿತ್ತು. ಆದರೆ, ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಗೆ ಇರಾನ್ ರಿಯಾಯಿತಿ ನೀಡಿರುವುದು ಗಮನಾರ್ಹವಾಗಿತ್ತು.

ಸದ್ಯ ಇರಾನ್‌ನ ಲೀಡರ್ ಮೊಜ್ತಾಬಾ ಖಮೇನಿ ಅವರ ಒಪ್ಪಿಗೆಯೊಂದಿಗೆ ಮಾತುಕತೆಗಳು ಆರಂಭವಾಗಿವೆ. ಆದರೂ, “ಮಾತುಕತೆ ಮುರಿದುಬಿದ್ದರೆ ದಾಳಿ ನಿಶ್ಚಿತ” ಎಂದು ಇರಾನ್ ಎಚ್ಚರಿಸಿದೆ. ಸದ್ಯಕ್ಕೆ 14 ದಿನಗಳ ಕಾಲ ಜಗತ್ತು ನಿಟ್ಟುಸಿರು ಬಿಡುವಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !