April 8, 2026
Wednesday, April 8, 2026
spot_img

ಷರೀಫ್‌ ಲೆಕ್ಕಾಚಾರ ಉಲ್ಟಾ: ಲೆಬನಾನ್‌ ಮೇಲೆ ದಾಳಿ ನಿಲ್ಲಿಸಲ್ಲ ಎಂದು ಗುಡುಗಿದ ನೆತನ್ಯಾಹು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್‌ ನಡುವೆ ಘೋಷಣೆಯಾಗಿರುವ ತಾತ್ಕಾಲಿಕ ಕದನ ವಿರಾಮದ ವಿಚಾರದಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಈ ಕದನ ವಿರಾಮವು ಲೆಬನಾನ್‌ ಸಂಘರ್ಷಕ್ಕೂ ಅನ್ವಯಿಸುತ್ತದೆ ಎಂದು ಹೇಳಿಕೆ ನೀಡಿದ್ದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಖಡಕ್‌ ತಿರುಗೇಟು ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್‌ ನಡುವೆ ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿದ್ದ ಪಾಕ್‌ ಪ್ರಧಾನಿ ಷರೀಫ್‌, “ಈ ಶಾಂತಿ ಒಪ್ಪಂದವು ಕೇವಲ ಅಮೆರಿಕ-ಇರಾನ್‌ಗೆ ಮಾತ್ರವಲ್ಲ, ಲೆಬನಾನ್‌ ಸೇರಿದಂತೆ ಇತರೆ ಸಂಘರ್ಷ ಪೀಡಿತ ಪ್ರದೇಶಗಳಿಗೂ ಅನ್ವಯಿಸುತ್ತದೆ” ಎಂದು ಬರೆದುಕೊಂಡಿದ್ದರು.

ಷರೀಫ್‌ ಅವರ ಈ ಹೇಳಿಕೆಯನ್ನು ತಕ್ಷಣವೇ ತಿರಸ್ಕರಿಸಿದ ಇಸ್ರೇಲ್‌ ಪ್ರಧಾನಿ ನೆತನ್ಯಾಹು, ಈ ಕದನ ವಿರಾಮವು ಕೇವಲ ಇರಾನ್‌ ಮತ್ತು ಅಮೆರಿಕದ ನಡುವಿನ ಸಂಘರ್ಷಕ್ಕೆ ಮಾತ್ರ ಸೀಮಿತ. ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರರ ವಿರುದ್ಧ ಇಸ್ರೇಲ್‌ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಎಂದಿನಂತೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್‌ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಧ್ಯಕ್ಷ ಟ್ರಂಪ್‌ ಅವರ ನಿರ್ಧಾರಕ್ಕೆ ಇಸ್ರೇಲ್‌ ಬೆಂಬಲ ಸೂಚಿಸಿದೆ. ಇರಾನ್‌ನಿಂದ ಎದುರಾಗುತ್ತಿರುವ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಗಳನ್ನು ಶಾಶ್ವತವಾಗಿ ಅಂತ್ಯಗೊಳಿಸುವ ಅಮೆರಿಕದ ಪ್ರಯತ್ನಗಳಿಗೆ ಇಸ್ರೇಲ್‌ ಸಹಮತ ವ್ಯಕ್ತಪಡಿಸಿದೆ. ಮುಂಬರುವ ಮಾತುಕತೆಗಳಲ್ಲಿ ಇಸ್ರೇಲ್‌ ಮತ್ತು ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿಯನ್ನು ಕಾಪಾಡುವುದಾಗಿ ಅಮೆರಿಕ ಭರವಸೆ ನೀಡಿದೆ. ಆದರೆ, ಈ ಯಾವುದೇ ಒಪ್ಪಂದದಲ್ಲಿ ಲೆಬನಾನ್‌ ಸೇರಿಲ್ಲ ಎಂಬುದು ಈಗ ಜಗತ್ತಿಗೆ ಸ್ಪಷ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !