ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಇರಾನ್ ನಡುವಿನ ಯುದ್ಧಕ್ಕೆ ಕೊನೆಗೂ ಕದನ ವಿರಾಮ ಘೋಷಿಸಲಾಗಿದ್ದು, ಇದರ ಬೆನ್ನಲ್ಲೇ ಇತ್ತ ಇಸ್ರೇಲ್ ಲೆಬನಾನ್‌ನ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ.
ಲೆಬನಾನ್‌ನ ಪ್ರಮುಖ ಸ್ಥಳಗಳಾದ ಬೈರೂಟ್‌ನ ಮಧ್ಯಭಾಗ, ದಕ್ಷಿಣ ಲೆಬನಾನ್ ಮತ್ತು ಪೂರ್ವ ಬೆಕಾವಾ ಕಣಿವೆಯ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೆ ಕೇವಲ 10 ನಿಮಿಷಗಳ ಅಂತರದಲ್ಲಿ 100ಕ್ಕೂ ಹೆಚ್ಚು ಭೀಕರ ಬಾಂಬ್ ದಾಳಿ ನಡೆಸಿದೆ.
ಈಗಾಗಲೇ ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಲೆಬನಾನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಲೆಬನಾನ್ ಮೇಲೆ ಭೀಕರ ದಾಳಿ ಮುಂದುವರಿಸಿದ್ದಾರೆ. ದಾಳಿಯ ಭೀಕರತೆಗೆ ವಸತಿ ಸಂಕೀರ್ಣಗಳು ಮತ್ತು ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆ ಪ್ರದೇಶಗಳು ನೆಲಸಮವಾಗಿವೆ.
ದಾಳಿಯ ತೀವ್ರತೆಗೆ ತುರ್ತು ಸೇವಾ ಸಿಬ್ಬಂದಿಗಳು ಅವಶೇಷಗಳ ಅಡಿಯಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹತ್ತಾರು ಕುಟುಂಬಗಳು ಜೀವಂತ ಸಮಾಧಿಯಾಗಿರುವ ಸಾಧ್ಯತೆಯಿದೆ.
ಇತ್ತ ಇರಾನ್ ಜೊತೆಗಿನ ಯುದ್ಧ ನಿಂತರೂ, ಲೆಬನಾನ್ ಮೇಲೆ ಇಸ್ರೇಲ್‌ನ ದಾಳಿ ಜಾಗತಿಕ ಮಟ್ಟದಲ್ಲಿ ಮತ್ತೆ ಬಿಗುವಿನ ವಾತಾವರಣ ಸೃಷ್ಟಿಸಿದೆ.



