ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಅಸ್ಥಿರತೆ ಮುಂದುವರಿದಿರುವ ಬೆನ್ನಲ್ಲೇ, ಭಾರತದ ಧ್ವಜ ಹೊತ್ತ ‘ಗ್ರೀನ್ ಆಶಾ’ ಎಲ್‌ಪಿಜಿ ಟ್ಯಾಂಕರ್ ಹಡಗು ಅತ್ಯಂತ ಅಪಾಯಕಾರಿ ಎನ್ನಲಾಗುವ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. 15,400 ಟನ್ ಎಲ್‌ಪಿಜಿ ಹೊತ್ತ ಈ ಹಡಗು ನವಿ ಮುಂಬೈನ ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರವನ್ನು ಸುರಕ್ಷಿತವಾಗಿ ತಲುಪಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ನಂತರ, ಹಾರ್ಮುಜ್ ಜಲಸಂಧಿಯಂತಹ ಸೂಕ್ಷ್ಮ ಪ್ರದೇಶವನ್ನು ದಾಟಿ ಜೆಎನ್‌ಪಿಎ ತಲುಪಿದ ಮೊದಲ ಭಾರತೀಯ ಹಡಗು ಇದಾಗಿದೆ.
ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಮತ್ತು ಸರಕು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಬಂದರು ಪ್ರಾಧಿಕಾರ ಖಚಿತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ JNPA, “ಭಾರತದ ಧ್ವಜಧಾರಿ ಹಡಗನ್ನು ನಾವು ಹೆಮ್ಮೆಯಿಂದ ಸ್ವಾಗತಿಸಿದ್ದೇವೆ. ಯುದ್ಧದ ಸಂದರ್ಭದಲ್ಲೂ ಈ ಕಾರ್ಯಾಚರಣೆ ಯಶಸ್ವಿಯಾಗಿರುವುದು ಗಮನಾರ್ಹ,” ಎಂದು ಬಣ್ಣಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಆತಂಕವಿತ್ತು. ಆದರೆ, ‘ಗ್ರೀನ್ ಆಶಾ’ ಹಡಗಿನ ಈ ಯಶಸ್ವಿ ಆಗಮನವು ಭಾರತದ ಇಂಧನ ಭದ್ರತೆ ಮತ್ತು ಕಡಲ ಸಾರಿಗೆಯ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ.



