April 11, 2026
Saturday, April 11, 2026
spot_img

ಉಜ್ಜಯಿನಿಯಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ ಕಂದಮ್ಮ ಸಾ*ವು: ಸಾವಿರ ತಾಯಂದಿರ ಪ್ರಾರ್ಥನೆ ಫಲಿಸಲೇ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಎರಡೂವರೆ ವರ್ಷದ ಕಂದಮ್ಮ ಮೃತಪಟ್ಟಿದ್ದಾನೆ.

ಗುರುವಾರ ಸಂಜೆ ಸುಮಾರು 7ರಿಂದ 7:30ರ ನಡುವೆ ಬದ್ನಗರ ತಾಲೂಕಿನ ಝಲಾರಿಯಾ ಗ್ರಾಮದಲ್ಲಿ ಭಗೀರಥ ಎಂಬ ಬಾಲಕ ಕೊಳವೆ ಬಾವಿಗೆ ಜಾರಿ ಬಿದ್ದಿದ್ದ. ಆತನನ್ನು ಸುರಕ್ಷಿತವಾಗಿ ಹೊರಕ್ಕೆ ತೆಗೆಯಲು ಹರಸಾಹಸ ಮಾಡಲಾಗಿತ್ತು. ಆದರೆ ಸಾವಿರಾರು ತಾಯಂದಿರ ಪ್ರಾರ್ಥನೆ ಫಲಿಸಲಿಲ್ಲ. ಮಗು ಮೃತಪಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.

ರಕ್ಷಣಾ ಕಾರ್ಯಾಚರಣೆ ವೇಳೆ ಕಲ್ಲುಗಳಿಂದ ಕೂಡಿದ ಭೂಭಾಗ ಮತ್ತು ದೊಡ್ಡ ಬಂಡೆಗಳು ತೀವ್ರ ಅಡ್ಡಿಯಾಗಿದ್ದು, ತೋಡುವ ಕಾರ್ಯ ನಿಧಾನಗತಿಯಲ್ಲಿ ಸಾಗಿತು. 40 ಅಡಿ ತನಕ ತೋಡಿದ ನಂತರ ಕಲ್ಲಿನ ಪದರಗಳು ಎದುರಾದ ಕಾರಣ, ಭೋಪಾಲ್ ಮತ್ತು ಇಂದೋರ್ ನಗರಗಳಿಂದ ವಿಶೇಷ ಡ್ರಿಲ್ಲಿಂಗ್ ಯಂತ್ರಗಳನ್ನು ತರಿಸಲಾಯಿತು.

ಪೋಕ್ಲೈನ್ ಮತ್ತು ಜೆಸಿಬಿ ಸೇರಿದಂತೆ ಹಲವಾರು ಯಂತ್ರಗಳನ್ನು ಬಳಸಲಾಗಿತ್ತು. ಬಾಲಕನ ಸ್ಥಿತಿಯನ್ನು ತಿಳಿಯಲು ಬೋರ್‌ವೆಲ್ ಒಳಗೆ ಕ್ಯಾಮೆರಾ ಹಾಕಲಾಗಿತ್ತು ಮತ್ತು ನಿರಂತರವಾಗಿ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಜೊತೆಗೆ ರೆಸ್ಕ್ಯೂ ರಿಂಗ್ ಬಳಸಿ ಮೇಲಕ್ಕೆಳೆದು ತರಲು ಪ್ರಯತ್ನಿಸಲಾಯಿತು. ಆದರೂ ಸುಮಾರು 23 ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಬಾಲಕನನ್ನು ಹೊರತೆಗೆದಾಗ ಅವನು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂತಾಪ ಸೂಚಿಸಿ, ಮೃತ ಬಾಲಕನ ಕುಟುಂಬಕ್ಕೆ 4 ಲಕ್ಷ ಪರಿಹಾರ ನೆರವನ್ನು ಘೋಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !