April 14, 2026
Tuesday, April 14, 2026
spot_img

49 ಲಕ್ಷ ರೂ ಖರ್ಚು ಮಾಡಿ ಟ್ರಿಪ್ ಹೋದ್ರೆ ವಿಮಾನ ಹತ್ತೋಕೆ ಬಿಟ್ಟಿಲ್ಲ: Dutch Airlines ವಿರುದ್ಧ ಸಿಟ್ಟಿಗೆದ್ದ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಟುಂಬದೊಂದಿಗೆ ಕನಸಿನ ವಿದೇಶ ಪ್ರವಾಸಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ತಮಿಳುನಾಡಿನ ಕುಟುಂಬವೊಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಆಘಾತ ಎದುರಿಸಿದೆ.

ಸುಮಾರು 49 ಲಕ್ಷ ವೆಚ್ಚದಲ್ಲಿ ಎಂಟು ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೂ, ಕೊನೆಯ ಕ್ಷಣದಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಬೋರ್ಡಿಂಗ್ ನಿರಾಕರಿಸಿದ ಘಟನೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸೇಲಂ ಮೂಲದ ಜೆ.ಎಸ್. ಸತೀಶ್ ಕುಮಾರ್ ಹಾಗೂ ಅವರ ಕುಟುಂಬದ ಎಂಟು ಮಂದಿ ಪೆರು ಪ್ರವಾಸಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು. 2024ರ ಜೂನ್ 19ರಂದು ಬೆಂಗಳೂರಿನಿಂದ ಹೊರಡಬೇಕಿದ್ದ ವಿಮಾನಕ್ಕೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ, ಪೆರು ವೀಸಾ ಇಲ್ಲ ಎಂಬ ಕಾರಣ ನೀಡಿ ವಿಮಾನ ಏರಲು ಅವಕಾಶ ನೀಡಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಆದರೆ, ತಮ್ಮ ಬಳಿ ಅಮೆರಿಕ/ಯುಕೆ/ಷೆಂಗೆನ್ ವೀಸಾ ಇದ್ದುದರಿಂದ ಪ್ರತ್ಯೇಕ ಪೆರು ವೀಸಾ ಅಗತ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಘಟನೆ ನಂತರ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ದೇವನಹಳ್ಳಿ ನ್ಯಾಯಾಲಯವು ಈ ಸಂಬಂಧ ಕೆಎಲ್‌ಎಂ ಸಂಸ್ಥೆಯ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಇದನ್ನೂ ಓದಿ:

ಕುಟುಂಬದ ಮತ್ತೊಂದು ಗಂಭೀರ ಆರೋಪವೆಂದರೆ, ವಿಮಾನಯಾನ ಸಂಸ್ಥೆ ಅವರ ಮೇಲೆ ‘ರೆಡ್ ಫ್ಲ್ಯಾಗ್’ ಮಾಡಿದೆ ಎಂಬುದು. ಇದರಿಂದ ಮುಂದಿನ ವಿದೇಶ ಪ್ರಯಾಣಗಳಲ್ಲಿ ಹೆಚ್ಚುವರಿ ವಿಚಾರಣೆ ಮತ್ತು ತೊಂದರೆ ಎದುರಿಸಬೇಕಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವು ಅಂತರಾಷ್ಟ್ರೀಯ ಪ್ರಯಾಣದ ವೀಸಾ ನಿಯಮಗಳ ಬಗ್ಗೆ ವಿಮಾನ ಸಂಸ್ಥೆಗಳ ಜವಾಬ್ದಾರಿಯನ್ನು ಮತ್ತೆ ಚರ್ಚೆಗೆ ತಂದಿದೆ.

ಅನ್ವಯವಾಗುವ ಎಲ್ಲಾ ಪ್ರಯಾಣ ಮತ್ತು ವಲಸೆ ನಿಯಮಗಳನ್ನು ಪಾಲಿಸುವುದು ಬದ್ಧವಾಗಿದೆ ಎಂದು ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ ಹೇಳಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !