ಹೊಸದಿಗಂತ ಡಿಜಿಟಲ್ ಡೆಸ್ಕ್:
ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 27ನೇ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್‌ಗಳ ಸೋಲೊಪ್ಪಿಕೊಂಡಿದೆ. ಅಂತಿಮ ಓವರ್‌ನವರೆಗೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಕೇವಲ ಒಂದು ಎಸೆತ ಬಾಕಿ ಇರುವಂತೆ ಡೆಲ್ಲಿ ತಂಡ ವಿಜಯದ ನಗು ಬೀರಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ನಿಗದಿತ 20 ಓವರ್‌ಗಳಲ್ಲಿ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ನೀಡಿದ ಭರ್ಜರಿ ಆರಂಭದಿಂದ ತಂಡ ದೊಡ್ಡ ಸ್ಕೋರ್ ಗಳಿಸುವ ಭರವಸೆ ನೀಡಿತ್ತು. ಆದರೆ, 176 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 19.5 ಓವರ್‌ಗಳಲ್ಲಿ 178 ರನ್ ಗಳಿಸಿ ಗುರಿ ತಲುಪಿತು.
ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. “ಇದು ಖಂಡಿತವಾಗಿಯೂ ನಾವು ಗೆಲ್ಲಬೇಕಾದ ಪಂದ್ಯವಾಗಿತ್ತು. ಬ್ಯಾಟಿಂಗ್‌ನಲ್ಲಿ ನಾವು ಕನಿಷ್ಠ 15-20 ರನ್ ಕಡಿಮೆ ಗಳಿಸಿದೆವು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ದಿಢೀರ್ ವಿಕೆಟ್ ಕಳೆದುಕೊಂಡಿದ್ದು ನಮಗೆ ದೊಡ್ಡ ಹೊಡೆತ ನೀಡಿತು,” ಎಂದು ಅವರು ವಿಶ್ಲೇಷಿಸಿದ್ದಾರೆ.
ಮಧ್ಯಮ ಕ್ರಮಾಂಕದ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಾದ ಅಗತ್ಯವಿದೆ ಎಂದು ನಾಯಕ ಕಿವಿಮಾತು ಹೇಳಿದ್ದಾರೆ. “ಸೋಲಿನ ನಡುವೆಯೂ ಬೌಲರ್‌ಗಳು ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದ ರೀತಿ ಮೆಚ್ಚುವಂತಹದ್ದು. ಇದೊಂದು ಸುದೀರ್ಘ ಟೂರ್ನಿಯಾಗಿದ್ದು, ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಗಳಲ್ಲಿ ಬಲವಾಗಿ ಕಂಬ್ಯಾಕ್ ಮಾಡುತ್ತೇವೆ,” ಎಂಬ ಭರವಸೆಯನ್ನು ಪಾಟಿದಾರ್ ವ್ಯಕ್ತಪಡಿಸಿದ್ದಾರೆ.



