ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯದ ಮೇಲಿನ ತೆರಿಗೆ ವಿಧಾನವನ್ನು ಸಂಪೂರ್ಣವಾಗಿ ಮರು ರೂಪಿಸುವತ್ತ ಕರ್ನಾಟಕ ಸರ್ಕಾರ ಹೆಜ್ಜೆ ಇಟ್ಟಿದ್ದು, ಇದರಿಂದ ಮದ್ಯದ ಬೆಲೆಯಲ್ಲಿ ಏರಿಕೆ ಸಾಧ್ಯತೆ ಕಾಣುತ್ತಿದೆ. “Alcohol-in-Beverage (AIB)” ಆಧಾರಿತ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಕರಡು ಅಧಿಸೂಚನೆ ಪ್ರಕಟವಾಗಿದ್ದು, ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ.
ಈ ಹೊಸ ನೀತಿಯ ಪ್ರಕಾರ, ಮದ್ಯದ ಬಾಟಲಿನ ಗಾತ್ರದ ಬದಲಿಗೆ ಅದರಲ್ಲಿರುವ ನಿಜವಾದ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಹೆಚ್ಚು ಆಲ್ಕೋಹಾಲ್ ಇರುವ ಮದ್ಯಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದ್ದು, ಕಡಿಮೆ ಬೆಲೆಯ ವಿಸ್ಕಿ, ರಮ್, ಬ್ರಾಂಡಿ ಹಾಗೂ ಜಿನ್ ದರಗಳು ಹೆಚ್ಚಾಗುವ ಸಾಧ್ಯತೆ ಇದೆ.
ಪ್ರಸ್ತುತ ಇರುವ ಪ್ರಮಾಣ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಬದಲಿಸಿ, ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ ವಿಧಿಸುವ ಹೊಸ ಕ್ರಮ ಜಾರಿಗೆ ಬಂದರೆ, ಕರ್ನಾಟಕ ದೇಶದಲ್ಲೇ ಈ ಮಾದರಿಯನ್ನು ಅನುಸರಿಸುವ ಮೊದಲ ರಾಜ್ಯವಾಗಲಿದೆ.
ಇದನ್ನೂ ಓದಿ:
ಈ ಬದಲಾವಣೆಯ ಪರಿಣಾಮವಾಗಿ ಸಾಮಾನ್ಯವಾಗಿ ಕಡಿಮೆ ಬೆಲೆಯ ಮದ್ಯ ಹೆಚ್ಚು ದುಬಾರಿ ಆಗುವ ಸಾಧ್ಯತೆ ಇದೆ. ಈಗಾಗಲೇ ವಿವಿಧ ಸ್ಲ್ಯಾಬ್‌ಗಳಲ್ಲಿ ಮಾರಾಟವಾಗುತ್ತಿರುವ ಮದ್ಯಗಳಲ್ಲಿ, ವಿಶೇಷವಾಗಿ ಮೊದಲ ನಾಲ್ಕು ಸ್ಲ್ಯಾಬ್‌ಗಳಿಗೆ ಸೇರಿದ ಮದ್ಯದ ದರಗಳು ಹೆಚ್ಚಾಗಬಹುದು. ಈ ವಿಭಾಗದಲ್ಲಿರುವ ಮದ್ಯಗಳಲ್ಲಿ ಸರಾಸರಿ 42.8% ಆಲ್ಕೋಹಾಲ್ ಅಂಶವಿದ್ದು, ಇವುಗಳೇ ಒಟ್ಟು ಎಕ್ಸೈಸ್ ಆದಾಯದ ಬಹುಪಾಲು ಹೊಂದಿವೆ.
ಈ ಹೊಸ ತೆರಿಗೆ ವ್ಯವಸ್ಥೆಯನ್ನು ಕರ್ನಾಟಕ ಅಬಕಾರಿ ಕಾಯ್ದೆ, 1965ರ ಅಡಿಯಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ, AIB ನೀತಿ ಜಾರಿಗೆ ಬಂದರೆ ರಾಜ್ಯದ ಮದ್ಯ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆ ಕಾಣುವುದು ಖಚಿತವಾಗಿದೆ.



