April 20, 2026
Monday, April 20, 2026
spot_img

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಪರಾಕ್ರಮವನ್ನು ಕೊಂಡಾಡಿದ ದಕ್ಷಿಣ ಕೊರಿಯಾ ಅಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇಂದು ಭಾರತಕ್ಕೆ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಆಗಮಿಸಿದ್ದು, ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಎಂಟು ವರ್ಷಗಳ ಬಳಿಕ ದಕ್ಷಿಣ ಕೊರಿಯಾ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ್ದು, ರಕ್ಷಣಾ, ಆರ್ಥಿಕ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಯ ಕುರಿತು ಚರ್ಚೆ ನಡೆದಿದೆ.

ಈ ವೇಳೆ ಪ್ರಸ್ತುತ ಜಗತ್ತಿನ ವಿದ್ಯಮಾನಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಭಾರತದ ಧೈರ್ಯ ಹಾಗೂ ಸಾಹಸವನ್ನು ಕೊಂಡಾಡಿದ್ದಾರೆ. ಅದರಲ್ಲೂ ಹಾರ್ಮುಜ್‌ ಜಲಸಂಧಿ ಸಮಸ್ಯೆಯ ನಡುವೆಯೂ ಭಾರತ ರಾಜತಾಂತ್ರಿಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ವಿಶ್ವದಲ್ಲಿ ಭಾರತ ಕೇವಲ ಹೆಚ್ಚು ಜನಸಂಖ್ಯೆ ಹೊಂದಿದ್ದ ರಾಷ್ಟ್ರವಾಗಿರದೆ, ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹಾಗೂ ಜಗತ್ತಿನ ಪ್ರಮುಖ ದ್ವನಿಯಾಗಿ ನಿಂತಿದೆ ಎಂದು ಹೇಳಿದರು.

ಮಧ್ಯಪ್ರಾಚ್ಯದಲ್ಲಿನ ಕದನದ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಅಡೆತಡೆಗಳು ಉಂಟಾದರೆ ಭಾರತ ಹಾಗೂ ದಕ್ಷಿಣ ಕೊರಿಯಾ ಜೊತೆಯಾಗಿ ಪರಿಹಾರ ಹುಡುಕಲಿದೆ ಎಂದು ತಿಳಿಸಿದರು.

ಕದನದಿಂದ ತೈಲ ಪೂರೈಕೆಯಲ್ಲಿ ಸಮಸ್ಯೆ ಉಂಟಾದರೂ ಭಾರತದ ಜೊತೆ ಸೇರಿ ಜಗತ್ತಿನ ಎದುರು ಧ್ವನಿ ಎತ್ತುತ್ತೇವೆ. ಈ ಮೂಲಕ ಜಲಸಂಧಿಯ ಮೂಲಕ ನಮ್ಮ ಹಡುಗುಗಳ ಮುಕ್ತ ಸಂಚಾರದ ಸ್ಪಷ್ಟತೆಯ ಕುರಿತು ತಿಳಿಯಲು ಭಾರತದೊಂದಿಗೆ ಸಂಪರ್ಕದಲ್ಲಿ ಇರುತ್ತೇವೆ ಎಂದು ತಿಳಿಸಿದರು.

ರಕ್ಷಣಾ ಕ್ಷೇತ್ರದಲ್ಲೂ ಭಾರತ ಹಾಗೂ ದಕ್ಷಿಣ ಕೊರಿಯಾ ಸಂಬಂಧ ಉತ್ತಮವಾಗಿದ್ದು, ಶಕ್ತಿಶಾಲಿ ಫಿರಂಗಿಗಳು ಭಾರತದ ಸೇನೆ ಬಲ ಹೆಚ್ಚಿಸಿದೆ . ಈ ಮೂಲಕ ನಮ್ಮ ರಕ್ಷಣಾ ಕ್ಷೇತದಲ್ಲಿನ ಸಂಬಂಧವು ಗಟ್ಟಿಯಾಗಿ ನಿಂತಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !