September 26, 2026
Saturday, September 26, 2026
spot_img

ವೆನೆಜುವೆಲಾ ಮಾದರಿಯಲ್ಲಿ ಇರಾನ್ ಧ್ವಂಸ?: ಡೊನಾಲ್ಡ್ ಟ್ರಂಪ್ ನೀಡಿರುವ ಆ ಭೀಕರ ಎಚ್ಚರಿಕೆಯಲ್ಲೇನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಯುದ್ಧದ ಕಿಚ್ಚು ಸದ್ಯಕ್ಕೆ ತಣ್ಣಗಾಗುವ ಮುನ್ಸೂಚನೆ ಕಾಣಿಸುತ್ತಿಲ್ಲ. ಇರಾನ್ ಜೊತೆಗೆ ಕದನ ವಿರಾಮದ ಮಾತುಕತೆ ನಡೆಸುತ್ತಿದ್ದ ಅಮೆರಿಕ, ಇದೀಗ ದಿಢೀರನೆ ಇರಾನ್ ವಿರುದ್ಧವೇ ಪೂರ್ಣ ಪ್ರಮಾಣದ ಸಮರ ಸಾರಲು ಮುಂದಾಗಿದೆ. ಇಂದು ರಾತ್ರಿಯೇ ಇರಾನ್ ದೇಶದ ಮೇಲೆ ಭೀಕರ ಮಿಲಿಟರಿ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ತಾರಕಕ್ಕೇರಿದೆ.

ತಮ್ಮದೇ ಆದ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, “ಅಮೆರಿಕ ಪಡೆಗಳು ಇಂದು ರಾತ್ರಿ ಇರಾನ್ ಮೇಲೆ ಅತ್ಯಂತ ಕಠಿಣ ದಾಳಿ ನಡೆಸಲಿವೆ. ಇರಾನ್‌ನ ನೌಕಾಪಡೆ, ವಾಯುಪಡೆ, ರೇಡಾರ್ ಹಾಗೂ ವೈಮಾನಿಕ ರಕ್ಷಣಾ ವ್ಯವಸ್ಥೆಗಳು ಈಗಾಗಲೇ ಧ್ವಂಸಗೊಂಡಿವೆ” ಎಂದು ಪ್ರತಿಪಾದಿಸಿದ್ದಾರೆ.

ಪ್ರಮುಖ ಹೈಲೈಟ್: ಈ ಹಿಂದೆ ವೆನೆಜುವೆಲಾದಲ್ಲಿ ಮಾಡಿದಂತೆಯೇ, ಇರಾನ್‌ನ ಪ್ರಮುಖ ಆರ್ಥಿಕ ಕೇಂದ್ರವಾದ ‘ಖಾರ್ಗ್ ದ್ವೀಪ’ ಸೇರಿದಂತೆ ಇರಾನ್‌ನ ಪ್ರಮುಖ ತೈಲ ಮತ್ತು ಅನಿಲ ಘಟಕಗಳನ್ನು ಸಂಪೂರ್ಣವಾಗಿ ಅಮೆರಿಕದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

ಇದಾದ ಬೆನ್ನಲ್ಲೇ ‘ಫಾಕ್ಸ್ ನ್ಯೂಸ್’ ಸಂದರ್ಶನದಲ್ಲೂ ಮಾತನಾಡಿದ ಅವರು, ಇರಾನ್ ಜೊತೆ ಮಾತುಕತೆ ನಡೆಯುತ್ತಿದ್ದರೂ, ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಟ್ರಂಪ್ ಅವರ ಈ ಆಕ್ರಮಣಕಾರಿ ಹೇಳಿಕೆಗಳು ಜಾಗತಿಕ ರಾಜಕೀಯ ಮತ್ತು ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿವೆ.

Must Read