ಹೊಸ ದಿಗಂತ ವರದಿ, ಮಂಗಳೂರು:
ಉತ್ತರ ಕರ್ನಾಟಕ ಭಾಗದ ಹಲವು ಮಂದಿ ಪೊಲೀಸ್ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರು ವರ್ಗಾವಣೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಹಂತ ಹಂತವಾಗಿ ಅವರ ವರ್ಗಾವಣೆಗೆ ಅಗತ್ಯ ಕ್ರಮ ಕೈ ಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ನಡೆದ ಪಶ್ಚಿಮ ವಲಯ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಉತ್ತಮವಾಗಿದೆ. ಇದೇ ರೀತಿ ಶಾಂತಿಯ ವಾತಾವರಣ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದೂರಿಗಾಗಿ ಕಾದರು
ಮಂಗಳೂರಿನಲ್ಲಿ ಪಶ್ಚಿಮ ವಲಯ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಗೆ ಮಂಗಳವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆಗಮಿಸಿದ ವೇಳೆ ಕಳೆದ ಮೂರು ತಿಂಗಳಿಂದ ವರ್ಗಾವಣೆ ಆದೇಶ ಪತ್ರ ಬಂದರೂ ನಗರ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ ಎಂದು ಆರೋಪಿಸಿ ವರ್ಗಾವಣೆ ಆದೇಶ ಪಡೆದ ಪೊಲೀಸರ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿ ಅಹವಾಲು ಸಲ್ಲಿಸಿದ ವಿದ್ಯಮಾನ ನಡೆಯಿತು.
ವರ್ಗಾವಣೆ ಆದೇಶ ಬಂದು ಮೂರು ತಿಂಗಳು ಕಳೆದಿದೆ. ಇನ್ನೂ ನಿಯುಕ್ತಿ ಮಾಡಿಲ್ಲ. ಒಮ್ಮೆ ವರ್ಗಾವಣೆ ಆದೇಶ ಕಾರ್ಯಗತಗೊಳಿಸಿ ಎಂದು ವರ್ಗಾವಣೆಗೊಂಡ ಪೊಲೀಸ್ ಕುಟುಂಬಸ್ಥರು ಡಿಜಿಪಿ ಬಳಿ ಆಗ್ರಹಿಸಿದರು.



