April 26, 2026
Sunday, April 26, 2026
spot_img

ಮಾನವರಿಗೆ ಎಚ್5ಎನ್1 ಸೋಂಕು ಹರಡಿಲ್ಲ: ಹೆಸರಘಟ್ಟದಲ್ಲಿ ಹಕ್ಕಿಜ್ವರ ನಿಯಂತ್ರಣ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಹೊರವಲಯದ ಹೆಸರಘಟ್ಟದಲ್ಲಿ ಪತ್ತೆಯಾಗಿದ್ದ ಎಚ್5ಎನ್1 ಹಕ್ಕಿಜ್ವರ ಪ್ರಕರಣದ ಬಳಿಕ ಕೈಗೊಳ್ಳಲಾದ ಕಟ್ಟುನಿಟ್ಟಿನ ನಿಗಾವಳಿ ಮತ್ತು ನಿಯಂತ್ರಣ ಕ್ರಮಗಳು ಫಲಕಾರಿಯಾಗಿವೆ ಎನ್ನಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಂತೆ, ಇದುವರೆಗೆ ಈ ಸೋಂಕು ಮಾನವರಿಗೆ ಹರಡಿರುವ ಯಾವುದೇ ಪ್ರಕರಣ ದಾಖಲಾಗಿಲ್ಲ.

ಕೋಳಿ ಸಾಕಣೆ ತರಬೇತಿ ಕೇಂದ್ರದಲ್ಲಿದ್ದ ಕೋಳಿಗಳಲ್ಲಿ ಏಪ್ರಿಲ್ 14ರಂದು ಸೋಂಕು ದೃಢಪಟ್ಟ ಬಳಿಕ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಗಳು ತುರ್ತು ಕ್ರಮಕ್ಕೆ ಮುಂದಾಗಿದ್ದವು. ಸೋಂಕು ಕಂಡುಬಂದ ಪ್ರದೇಶದ ಸುತ್ತಮುತ್ತ ನಿರ್ದಿಷ್ಟ ವ್ಯಾಪ್ತಿಯನ್ನು ಸೋಂಕಿತ ಹಾಗೂ ನಿಗಾವಳಿ ವಲಯಗಳಾಗಿ ಗುರುತಿಸಿ, ಪ್ರವೇಶ-ನಿರ್ಗಮನದ ಮೇಲೂ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿತ್ತು.

ಇದನ್ನೂ ಓದಿ:

ಇದರ ಜೊತೆಗೆ ಸೋಂಕಿತ ಕೋಳಿಗಳನ್ನು ನಾಶಪಡಿಸುವ ಕಾರ್ಯಾಚರಣೆ ನಡೆಸಿ, ಮೊಟ್ಟೆ ಹಾಗೂ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗಿದೆ. ಜೈವಿಕ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಿ, ಸೋಂಕು ಮತ್ತಷ್ಟು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.

ನಿಗಾವಳಿ ಕಾರ್ಯಾಚರಣೆಯ ಭಾಗವಾಗಿ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸಾವಿರಾರು ಜನರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !