October 22, 2026
Thursday, October 22, 2026
spot_img

ಚಿಕ್ಕೋಡಿಯ ಜಾತ್ರಾ ಮಹೋತ್ಸವದಲ್ಲಿ ದುರಂತ: ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದ ಶೇಲ್ಲೆವ್ವಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಸಾದ ಸೇವಿಸಿದ ನೂರಕ್ಕೂ ಹೆಚ್ಚು ಭಕ್ತರು ಫುಡ್ ಪಾಯಿಸನ್ ಆಗಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಪ್ರಸಾದ ಸೇವಿಸಿದ ಕೆಲವೇ ಸಮಯದ ಬಳಿಕ ಭಕ್ತರಲ್ಲಿ ಭಾರಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಕಬ್ಬೂರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಈ ವೇಳೆ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಗುರುವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರತಿಯೊಬ್ಬರ ಬಳಿ ತೆರಳಿ ಆರೋಗ್ಯ ವಿಚಾರಿಸಿದರು. ಆತಂಕಕ್ಕೆ ಒಳಗಾಗದಂತೆ ರೋಗಿಗಳು ಹಾಗೂ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. 

ಯಾರಿಗೂ ಯಾವುದೇ ತೊಂದರೆ ಆಗದಂತೆ ಚಿಕಿತ್ಸೆ ನೀಡಲು ಹಾಗೂ ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಚಿಕಿತ್ಸೆ ಮತ್ತು ಔಷಧಿಗಳ ಲಭ್ಯತೆಯ ಬಗ್ಗೆ ಮಾಹಿತಿ ಪಡೆದರು.

ಪ್ರಕರಣದ ಬಗ್ಗೆ ತನಿಖೆ ನಡೆಸಿ, ಆಹಾರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಮತ್ತು ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಶಿಬಿರ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ಸಹಾಯಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್. ಎಸ್. ಕಣದಾಳೆ, ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾವಿ, ಡಾ.ಅನಿಲ್ ಪರೀಟ್, ಡಾ.ಜಯಲಕ್ಷ್ಮಿ ಮುಸಾಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೋಂಡಿದ್ದರು.

Must Read