June 19, 2026
Friday, June 19, 2026
spot_img

ವೇಪಿಂಗ್‌ ಮಾಡಿ ಸಿಕ್ಕಿಬಿದ್ದ ಪರಾಗ್ ಗೆ ಶಾಕ್: ಬಿಸಿಸಿಐಯಿಂದ ಬಿತ್ತು ದಂಡದ ಬರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್‌ ಮಾಡಿ ಸಿಕ್ಕಿಬಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ರಿಯಾನ್ ಪರಾಗ್ ಗೆ ಸಂಕಷ್ಟ ಎದುರಾಗಿದ್ದು, ಬಿಸಿಸಿಐ ದಂಡದ ಬರೆ ಎಳೆದಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್‌ ಮಾಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಸಂಬಂಧ ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್-1 ಉಲ್ಲಂಘನೆಯಾಗಿದ್ದು, ತಪ್ಪಿತಸ್ಥರೆಂದು ಕಂಡುಬಂದಿದೆ. ಹಾಗಾಗಿ ಬಿಸಿಸಿಐ ಪಂದ್ಯ ಶುಲ್ಕದ 25% ದಂಡ ಮತ್ತು ಒಂದು ಡೀಮೆರಿಟ್ ಪಾಯಿಂಟ್ ಅನ್ನು ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಬಿಸಿಸಿಐ , ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ಅನ್ನು ರಿಯಾನ್ ಉಲ್ಲಂಘಿಸಿದ್ದಾರೆ. ಇದು ಆಟಕ್ಕೆ ಅಪಖ್ಯಾತಿ ತರುವ ನಡವಳಿಕೆಯಾಗಿದೆ. ಹೀಗಾಗಿ ಮತ್ತಷ್ಟು ಕ್ರಮದ ಕುರಿತು ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದೆ.

ಈಗಾಗಲೇ ಭಾರತದಲ್ಲಿ ಇ-ಸಿಗರೇಟ್‌ ಗಳಿಗೆ ಅವಕಾಶವಿಲ್ಲ. ಅದರ ಅಡಿಯಲ್ಲಿ ಅವುಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮೊದಲ ಬಾರಿ ಅಪರಾಧ ಎಸಗಿದವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !