May 2, 2026
Saturday, May 2, 2026
spot_img

ಬಾಕ್ಸ್ ಆಫೀಸ್ ಸುನಾಮಿ: 10 ಸಾವಿರ ಕೋಟಿ ಕ್ಲಬ್ ಸೇರುತ್ತಾ ‘ಮೈಕಲ್’? ದಂಗಾದ ಸಿನಿಲೋಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಪ್ ಲೋಕದ ದಂತಕಥೆ ಮೈಕಲ್ ಜಾಕ್ಸನ್ ಅವರ ಜೀವನಗಾಥೆ ಬೆಳ್ಳಿತೆರೆಯ ಮೇಲೆ ಮ್ಯಾಜಿಕ್ ಮಾಡುತ್ತಿದೆ. ಏಪ್ರಿಲ್ 24 ರಂದು ವಿಶ್ವದಾದ್ಯಂತ ಬಿಡುಗಡೆಯಾದ ‘ಮೈಕಲ್’ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಗಳಿಕೆಯಲ್ಲಿ ಮಾತ್ರ ಸುನಾಮಿ ಎಬ್ಬಿಸಿದೆ. ಕೇವಲ ಒಂದು ವಾರದಲ್ಲಿ ಈ ಸಿನಿಮಾ ಮಾಡಿರುವ ಸಾಧನೆ ಕಂಡು ಚಿತ್ರರಂಗವೇ ಬೆಚ್ಚಿಬಿದ್ದಿದೆ.

ಮೈಕಲ್ ಜಾಕ್ಸನ್ ಅವರ ಸಹೋದರನ ಪುತ್ರ ಜಫಾರ್ ಜಾಕ್ಸನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ತಮ್ಮ ಚಿಕ್ಕಪ್ಪನ ಮ್ಯಾನರಿಸಂ ಮತ್ತು ನೃತ್ಯವನ್ನು ಅಚ್ಚುಕಟ್ಟಾಗಿ ಪರದೆಯ ಮೇಲೆ ತಂದಿರುವ ಜಫಾರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಚಿತ್ರಮಂದಿರಗಳತ್ತ ಮುಗಿಬೀಳುತ್ತಿದ್ದಾರೆ.

ಇದನ್ನೂ ಓದಿ:

ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ‘ಮೈಕಲ್’ ಸಿನಿಮಾ ಜಾಗತಿಕವಾಗಿ ಸುಮಾರು 2600 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತ ಗಳಿಸಿದ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಸಿನಿಮಾ ವಿಶ್ಲೇಷಕರ ಪ್ರಕಾರ, ಈ ಚಿತ್ರದ ಓಟ ಹೀಗೇ ಮುಂದುವರಿದರೆ ಒಟ್ಟು ಗಳಿಕೆ 10 ಸಾವಿರ ಕೋಟಿ ದಾಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾರತದಲ್ಲೂ ಮೈಕಲ್ ಜಾಕ್ಸನ್‌ಗೆ ಬೃಹತ್ ಅಭಿಮಾನಿ ಬಳಗವಿದೆ. ಹೀಗಿದ್ದರೂ, ಬಾಲಿವುಡ್‌ನ ‘ಧುರಂಧರ್ 2’ ಮತ್ತು ‘ಭೂತ್ ಬಂಗ್ಲ’ ಅಂತಹ ಸಿನಿಮಾಗಳ ಪ್ರಬಲ ಸ್ಪರ್ಧೆಯ ನಡುವೆ ‘ಮೈಕಲ್’ ಸಿನಿಮಾ ಮೊದಲ ವಾರದಲ್ಲಿ ಭಾರತದಲ್ಲಿ 32 ಕೋಟಿ ರೂಪಾಯಿ ಗಳಿಸಿದೆ.

ಹಿಂದೆ ‘ಅವೇಂಜರ್ಸ್’ ಅಥವಾ ‘ಸ್ಪೈಡರ್ ಮ್ಯಾನ್’ ಚಿತ್ರಗಳು ಭಾರತದಲ್ಲಿ 100-200 ಕೋಟಿ ಗಳಿಸಿದ ದಾಖಲೆಗಳಿವೆ. ಆದರೆ ಮೈಕಲ್ ಚಿತ್ರವು ಭಾರತದಲ್ಲಿ 150 ಕೋಟಿಯ ಗಡಿ ದಾಟುವುದು ಸದ್ಯದ ಮಟ್ಟಿಗೆ ತುಸು ಕಷ್ಟದ ಹಾದಿಯಂತೆ ಕಾಣುತ್ತಿದೆ. ಆದರೂ ಸಿನಿಮಾ ಪ್ರೇಮಿಗಳ ಕ್ರೇಜ್ ನೋಡಿದರೆ ಯಾವುದೂ ಅಸಾಧ್ಯವಲ್ಲ ಎನ್ನಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !