ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೆಚ್ಚಿದ ಬಿಸಿಲಿನ ಶಾಖದಿಂದಾಗಿ ನಿರ್ಜಲೀಕರಣ, ದಣಿವು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಸಾಮಾನ್ಯವಾಗುತ್ತವೆ. ಆದರೆ ಸರಿಯಾದ ಆಹಾರ ಪದ್ಧತಿ ಅನುಸರಿಸುವುದರಿಂದ ದೇಹವನ್ನು ಸುಲಭವಾಗಿ ತಂಪಾಗಿಡಬಹುದು.
ಬೇಸಿಗೆಯಲ್ಲಿ ದೇಹದ ತಾಪಮಾನ ನಿಯಂತ್ರಣಕ್ಕೆ ಈ ಆಹಾರ ಪದ್ಧತಿಯನ್ನು ಬಳಸಿ..
ಕಲ್ಲಂಗಡಿ
ಬೇಸಿಗೆಯ ಬಿಸಿಲಿಗೆ ಕಲ್ಲಂಗಡಿ ಹಣ್ಣಿಗಿಂತ ಮಿಗಿಲಾದ ಆಹಾರ ಮತ್ತೊಂದಿಲ್ಲ. ಕಲ್ಲಂಗಡಿಯಲ್ಲಿ ನೀರಿನಂಶದ ಪ್ರಮಾಣ ಹೆಚ್ಚು ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲೈಕೋಪೀನ್ ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಇದು ಪ್ರಮುಖ ಹಣ್ಣಾಗಿದೆ.
ಸೌತೆಕಾಯಿ
ನೀರು ಮತ್ತು ಪೋಷಕಾಂಶಗಳ ಗಣಿ ಅಂದರೆ ಅದು ಸೌತೆಕಾಯಿ, ಇದರಲ್ಲಿ ನೀರು ಮತ್ತು ಫೈಬರ್ ಸಮೃದ್ಧವಾಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ದೇಹದ ಒಳಭಾಗವನ್ನು ತಂಪಾಗಿಡುವಲ್ಲಿ ಸಹಕಾರಿ. ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ನಿಯಂತ್ರಣಕ್ಕೂ ಸಹಾಯಕ. ಇದು ಮಲಬದ್ಧತೆಯನ್ನು ದೂರವಿಟ್ಟು ದೇಹವನ್ನು ರಿಫ್ರೆಶ್ ಆಗಿಡುತ್ತದೆ.
ಇದನ್ನೂ ಓದಿ:
ಅನಾನಸ್
ಅನಾನಸ್ ಕೇವಲ ರುಚಿಯಷ್ಟೇ ಅಲ್ಲ, ಅನಾನಸ್‌ನಲ್ಲಿ ಬ್ರೋಮೆಲೈನ್ ಎಂಬ ಕಿಣ್ವವಿದ್ದು, ಇದು ಬಿಸಿಲಿನಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇದು ದೇಹಕ್ಕೆ ತ್ವರಿತ ಶಕ್ತಿ ನೀಡುತ್ತದೆ.
ಮೊಸರು
ಬೇಸಿಗೆಯಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬಹುದು, ಇದು ನಮ್ಮ ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪ್ರೋ ಬಯೋಟಿಕ್ಸ್ ನಮ್ಮ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತವೆ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ. ಇದರಲ್ಲಿರುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಬೇಸಿಗೆಯಲ್ಲಿ ಆಗುವ ಸುಸ್ತನ್ನು ದೂರ ಓಡಿಸಿ ನಿಮ್ಮನ್ನು ಸದಾ ಹುಮ್ಮಸ್ಸಿನಲ್ಲಿ ಇರುವಂತೆ ಮಾಡುತ್ತದೆ.
ನಿಂಬೆ ಹಣ್ಣು
ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ನಿಂಬೆ ಹಣ್ಣು ತುಂಬಾ ಒಳ್ಳೆಯದು. ಒಂದು ಲೋಟ ನಿಂಬೆ ಪಾನಕ ಕುಡಿದರೆ ಸಾಕು ಬೇಸಿಗೆಯ ಸುಸ್ತು ಮಾಯವಾಗಿ ತ್ವರಿತವಾಗಿ ದೇಹಕ್ಕೆ ಶಕ್ತಿ ಸಿಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ.



