ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಸಮುದ್ರ ಕಾರ್ಯಾಚರಣೆಗಳ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಹಡಗುಗಳನ್ನು ತಡೆದು ಸರಕು ಮತ್ತು ತೈಲವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳನ್ನು ಉಲ್ಲೇಖಿಸಿದ ಟ್ರಂಪ್, ಅಮೆರಿಕದ ನೌಕಾಪಡೆ ‘ಕಡಲ್ಗಳ್ಳರಂತೆ’ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಫ್ಲೋರಿಡಾದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಸಮುದ್ರ ಮಾರ್ಗಗಳಲ್ಲಿ ನಡೆಸಿದ ಕಾರ್ಯಾಚರಣೆಗಳನ್ನು ಯಶಸ್ವಿ ಕ್ರಮವೆಂದು ಬಣ್ಣಿಸಿದರು. ಹಡಗುಗಳನ್ನು ತಡೆದು ಸರಕುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ ಅವರು, ಇದನ್ನು ಲಾಭದಾಯಕ ಕಾರ್ಯಾಚರಣೆ ಎಂದೂ ವಿವರಿಸಿದರು.
ಇದನ್ನೂ ಓದಿ:
ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್, ಅಮೆರಿಕದ ಕ್ರಮವನ್ನು “ಸಶಸ್ತ್ರ ದರೋಡೆ” ಎಂದು ಕರೆದಿದೆ. ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಇರಾನಿನ ತೈಲ ಸಾಗಣೆ ಹಡಗುಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದೆ.
ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ಮತ್ತು ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆಯಿಂದ ಮಧ್ಯಪ್ರಾಚ್ಯದಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ. ಉಭಯ ರಾಷ್ಟ್ರಗಳ ನಡುವಿನ ಈ ವಾಕ್ಸಮರ ಜಾಗತಿಕ ವ್ಯಾಪಾರ ಮತ್ತು ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.



