May 3, 2026
Sunday, May 3, 2026
spot_img

Travel | ಟ್ರಕ್ಕಿಂಗ್‌ ಪ್ರಿಯರೇ ಗಮನಿಸಿ: ನಿಮ್ಮ ಬ್ಯಾಗ್‌ನಲ್ಲಿ ಈ ವಸ್ತುಗಳಿವೆಯೇ? ಚೆಕ್‌ ಮಾಡಿ

ಪ್ರಕೃತಿಯ ಮಡಿಲಲ್ಲಿ ಅಡ್ಡಾಡುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಇಂದಿನ ಯುವಜನತೆಗೆ ಟ್ರಕ್ಕಿಂಗ್ ಅಂದರೆ ಎಲ್ಲಿಲ್ಲದ ಕ್ರೇಜ್. ಎತ್ತರದ ಬೆಟ್ಟಗಳು, ದಟ್ಟವಾದ ಅರಣ್ಯ, ಹಚ್ಚಹಸಿರಿನ ಪರಿಸರ ಮತ್ತು ಸ್ನೇಹಿತರ ಜೊತೆ ಸ್ವತಃ ಅಡುಗೆ ಮಾಡಿ ಉಣ್ಣುವ ಆ ಖುಷಿಯೇ ಬೇರೆ. ಆದರೆ, ಸರಿಯಾದ ಸಿದ್ಧತೆ ಇಲ್ಲದೆ ಟ್ರಕ್ಕಿಂಗ್ ಹೋದರೆ ಆ ಖುಷಿ ಕಷ್ಟವಾಗಿ ಬದಲಾಗಬಹುದು. ನೀವು ಮೊದಲ ಬಾರಿ ಅಥವಾ ಪದೇ ಪದೇ ಚಾರಣಕ್ಕೆ ಹೋಗುವವರಾಗಿದ್ದರೆ, ನಿಮ್ಮ ಬ್ಯಾಗ್‌ನಲ್ಲಿ ಈ ಕೆಳಗಿನ ವಸ್ತುಗಳು ಇರಲೇಬೇಕು.

ಟ್ರಕ್ಕಿಂಗ್‌ಗೆ ಹೋಗುವಾಗ ನಾರ್ಮಲ್ ಬ್ಯಾಗ್‌ಗಳಿಗಿಂತ ವಿಶೇಷವಾಗಿ ವಿನ್ಯಾಸಗೊಳಿಸಿದ ಟ್ರಕ್ಕಿಂಗ್ ಬ್ಯಾಗ್ ಬಳಸುವುದು ಸೂಕ್ತ. ಇದು ನಿಮ್ಮ ಬೆನ್ನಿಗೆ ಆರಾಮ ನೀಡುವುದಲ್ಲದೆ, ಕೈಗಳು ಫ್ರೀ ಆಗಿರಲು ಸಹಾಯ ಮಾಡುತ್ತದೆ. ಬ್ಯಾಗ್ ಹಗುರವಾಗಿದ್ದಷ್ಟೂ ನಿಮ್ಮ ನಡಿಗೆ ಸುಲಭವಾಗುತ್ತದೆ.

ಬೆಟ್ಟ ಹತ್ತುವಾಗ ದೇಹಕ್ಕೆ ಹೆಚ್ಚು ಶಕ್ತಿ ಬೇಕಾಗುತ್ತದೆ ಮತ್ತು ಬೇಗ ಸುಸ್ತಾಗುತ್ತದೆ. ಆದ್ದರಿಂದ ದೇಹವನ್ನು ಹೈಡ್ರೇಟ್ ಆಗಿಡಲು ನೀರಿನ ಬಾಟಲಿ ಕೊಂಡೊಯ್ಯಿರಿ. ಹಸಿವಾದಾಗ ತಕ್ಷಣ ಶಕ್ತಿ ನೀಡುವ ಎನರ್ಜಿ ಬಾರ್‌ಗಳು, ಒಣ ಹಣ್ಣುಗಳು ಮತ್ತು ಹಗುರವಾದ ತಿಂಡಿಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಳ್ಳಿ.

ಚಾರಣದ ಹಾದಿಯಲ್ಲಿ ನಿಮ್ಮ ಬಟ್ಟೆಗಳು ಕಂಫರ್ಟಬಲ್ ಆಗಿರಲಿ. ಗಾಳಿಯಾಡುವ ಮತ್ತು ಬೆವರಿನಿಂದ ಕಿರಿಕಿರಿ ಉಂಟುಮಾಡದ ಬಟ್ಟೆಗಳನ್ನು ಆರಿಸಿ. ಬೆಟ್ಟದ ಪ್ರದೇಶಗಳಲ್ಲಿ ಹವಾಮಾನ ಯಾವಾಗ ಬದಲಾಗುತ್ತದೆ ಎಂದು ಹೇಳಲಾಗದು, ಆದ್ದರಿಂದ ಒಂದು ಸ್ವೆಟರ್, ಮಫ್ಲರ್ ಮತ್ತು ಸಾಕ್ಸ್‌ಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಜಾಣತನ.

ಕಲ್ಲು-ಮುಳ್ಳಿನ ಹಾದಿ ಅಥವಾ ಕೆಸರು ತುಂಬಿದ ದಾರಿಯಲ್ಲಿ ನಡೆಯಲು ಸಾಮಾನ್ಯ ಶೂಗಳಿಗಿಂತ ಉತ್ತಮ ಗ್ರಿಪ್ ಇರುವ ‘ಟ್ರಕ್ಕಿಂಗ್ ಶೂ’ಗಳು ಅತ್ಯಗತ್ಯ. ಚಾರಣ ಮುಗಿಸಿ ವಿಶ್ರಾಂತಿ ಪಡೆಯುವಾಗ ಬಳಸಲು ಒಂದು ಜೊತೆ ಫ್ಲಿಪ್ ಫ್ಲಾಪ್ಸ್ (Slippers) ಇಟ್ಟುಕೊಂಡರೆ ಪಾದಗಳಿಗೆ ಆರಾಮ ಸಿಗುತ್ತದೆ.

ಹತ್ತುವ ಹಾದಿಯಲ್ಲಿ ಸಣ್ಣಪುಟ್ಟ ಪೆಟ್ಟುಗಳಾಗುವುದು ಸಹಜ. ಮುಂಜಾಗ್ರತಾ ಕ್ರಮವಾಗಿ ಬ್ಯಾಂಡೇಜ್, ನೋವು ನಿವಾರಕ ಸ್ಪ್ರೇ, ಹಾಗೂ ಸಾಮಾನ್ಯ ಜ್ವರ, ಶೀತ ಅಥವಾ ತಲೆನೋವಿಗೆ ಅಗತ್ಯವಿರುವ ಮಾತ್ರೆಗಳನ್ನು ಇಟ್ಟುಕೊಳ್ಳಿ.

ಪ್ರಕೃತಿಯ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಫೋಟೋ ಕ್ಲಿಕ್ಕಿಸುವುದು ಕೂಡ ಮುಖ್ಯ. ನಿಮ್ಮ ಫೋನ್ ಅಥವಾ ಡಿಜಿಟಲ್ ಕ್ಯಾಮೆರಾ ಜೊತೆಗೆ ಪವರ್ ಬ್ಯಾಂಕ್ ಒಯ್ಯಲು ಮರೆಯಬೇಡಿ. ಬಿಸಿಲಿನಿಂದ ರಕ್ಷಣೆ ಪಡೆಯಲು ಸನ್ ಗ್ಲಾಸ್ ಮತ್ತು ಹ್ಯಾಟ್ ಧರಿಸುವುದು ಮರೆಯದಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !