November 13, 2026
Friday, November 13, 2026
spot_img

ಪತ್ನಿ ಎದುರೇ ರಿಯಲ್‌ ಎಸ್ಟೇಟ್‌ ಉದ್ಯಮಿಯ ಬರ್ಬರ ಹ*ತ್ಯೆ: ದುಷ್ಕರ್ಮಿಗಳು ಎಸ್ಕೇಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಹಾಡಹಗಲೇ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಯಲಹಂಕದ ನ್ಯೂ ಟೌನ್‌ನಲ್ಲಿರುವ ತಮ್ಮ ಕಚೇರಿಗೆ ಪತ್ನಿಯ ಜೊತೆ ಆಗಮಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಗ್ಯಾಂಗ್‌ ಉದ್ಯಮಿಯ ಮೇಲೆ ದಾಳಿ ನಡೆಸಿ ಎಸ್ಕೇಪ್‌ ಆಗಿದ್ದಾರೆ. ಮೃತರನ್ನು 39 ವರ್ಷದ ಚರಣ್ ಗೌಡ ಎಂದು ಗುರುತಿಸಲಾಗಿದೆ.

ಧಣಿ ಪ್ರಾಪರ್ಟೀಸ್ ಸಂಸ್ಥೆಯ ಮಾಲೀಕರಾಗಿದ್ದು, ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜು ಸಮೀಪ, ಬ್ಯಾಂಕ್ ಮುಂಭಾಗದಲ್ಲಿ ಈ ಭೀಕರ ಹತ್ಯೆ ನಡೆದಿದೆ. ಚರಣ್ ಗೌಡ ಅವರು ಯಲಹಂಕ ನ್ಯೂ ಟೌನ್‌ನಲ್ಲಿರುವ ತಮ್ಮ ಕಚೇರಿಗೆ ಪತ್ನಿಯೊಂದಿಗೆ ಆಗಮಿಸುತ್ತಿದ್ದರು. ಕೋಗಿಲು ನಿವಾಸದಿಂದ ಕಚೇರಿಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಬ್ಯಾಂಕ್‌ನ ಮೇಲ್ಮಹಡಿಯಲ್ಲಿ ಚರಣ್ ಗೌಡ ಅವರ ಕಚೇರಿ ಇತ್ತು ಎನ್ನಲಾಗಿದ್ದು, ಕಚೇರಿಗೆ ತೆರಳುವ ಮಾರ್ಗದಲ್ಲೇ ಹಂತಕರು ದಾಳಿ ನಡೆಸಿದ್ದಾರೆ.

ಐದರಿಂದ ಆರು ಮಂದಿ ಯುವಕರಿದ್ದ ಗ್ಯಾಂಗ್ ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ಚರಣ್ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 22 ವರ್ಷದ ಯುವಕರ ತಂಡ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಚರಣ್ ಅವರ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಚರಣ್ ಗೌಡ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುತ್ತಿದ್ದುದನ್ನು ಕಂಡ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಚರಣ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.. ಬಳಿಕ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಚರಣ್ ಗೌಡ ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವರೊಂದಿಗೆ ವಿವಾದ ಉಂಟಾಗಿತ್ತು. ಇದೇ ಹಳೆಯ ದ್ವೇಷದ ಹಿನ್ನೆಲೆ ಹತ್ಯೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Must Read