November 13, 2026
Friday, November 13, 2026
spot_img

ಕಂಗನಾ ನಟನೆಯ ‘ಸ್ಕೇರಿ ಪಿಕ್ಚರ್’ ಫಸ್ಟ್ ಲುಕ್ ಅನಾವರಣ: ಹಾರರ್ ಲೋಕಕ್ಕೆ ರಾಣಾ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ನಟ ಹಾಗೂ ನಿರ್ಮಾಪಕ ರಾಣಾ ದಗ್ಗುಬಾಟಿ, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಹಾರರ್ ಸಿನಿಮಾ ‘ಸ್ಕೇರಿ ಪಿಕ್ಚರ್’ ಚಿತ್ರದ ಮೊದಲ ಝಲಕ್ ಅನ್ನು ರಾಣಾ ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ನಿಗೂಢತೆ ಮತ್ತು ಭಯಕ್ಕೆ ಹೆಸರಾದ ‘ಫ್ರೈಡೇ ದಿ 13th’ ದಿನದಂದೇ ಈ ಪೋಸ್ಟರ್ ಬಿಡುಗಡೆಯಾಗಿರುವುದು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ದಶಕಗಳಿಂದ ಕೌಟುಂಬಿಕ ಮನರಂಜನಾ ಚಿತ್ರಗಳಿಗೆ ಹೆಸರಾಗಿರುವ ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಸುರೇಶ್ ಪ್ರೊಡಕ್ಷನ್ಸ್’ ಅಡಿಯಲ್ಲಿ ಹಿರಿಯ ನಿರ್ಮಾಪಕ ಸುರೇಶ್ ಬಾಬು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗಿನಲ್ಲಿ ‘ಅನಸೂಯ’ ಮತ್ತು ‘ಅವುನು’ ಅಂತಹ ಸೂಪರ್ ಹಿಟ್ ಥ್ರಿಲ್ಲರ್-ಹಾರರ್ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ರವಿ ಬಾಬು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದು ಬಾಲಿವುಡ್‌ನಲ್ಲಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಕಂಗನಾ ರಣಾವತ್ ಅವರಂತಹ ಪ್ರತಿಭಾವಂತ ನಟಿ ಮತ್ತು ರವಿ ಬಾಬು ಅವರ ನಿರ್ದೇಶನದ ಜುಗಲ್‌ಬಂದಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಚಿತ್ರದ ಬಗ್ಗೆ ಮಾತನಾಡಿರುವ ರಾಣಾ ದಗ್ಗುಬಾಟಿ, “ಭಾರತದ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಭಯ, ಕಥೆಗಳು ಮತ್ತು ಅವುಗಳನ್ನು ಹೇಳುವ ವಿಭಿನ್ನ ಶೈಲಿಗಳಿವೆ. ಸೈಕಲಾಜಿಕಲ್, ಕ್ರೀಚರ್, ಹಾರರ್-ಕಾಮಿಡಿ ಅಥವಾ ಸೋಶಿಯಲ್ ಹಾರರ್ ಹೀಗೆ ಯಾವುದೇ ಹೊಸ ಬಗೆಯ ಕಥೆಗಳಿಗೆ ನಾವು ಮುಕ್ತವಾಗಿದ್ದೇವೆ,” ಎಂದಿದ್ದಾರೆ. ಕೇವಲ ‘ಸ್ಕೇರಿ ಪಿಕ್ಚರ್’ ಮಾತ್ರವಲ್ಲದೆ, ‘ಸುರೇಶ್ ಪ್ರೊಡಕ್ಷನ್ಸ್’ ಮತ್ತು ‘ಸ್ಪಿರಿಟ್ ಮೀಡಿಯಾ’ ಮೂಲಕ ಭಾರತೀಯ ಹಾರರ್ ಸಿನಿಮಾ ನಿರ್ದೇಶಕರಿಗೆ ನಿರಂತರ ಬೆಂಬಲ ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯ ಅವಕಾಶ ಕಲ್ಪಿಸುವ ಪ್ರತ್ಯೇಕ ವೇದಿಕೆಯನ್ನು ನಿರ್ಮಿಸುವ ದೊಡ್ಡ ಗುರಿಯನ್ನು ರಾಣಾ ಹೊಂದಿದ್ದಾರೆ.

Must Read

Skip to toolbar