ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಲು ವೇದಿಕೆ ಸಿದ್ಧವಾಗಿದೆ. ದೀರ್ಘಕಾಲದ ಆಡಳಿತ ಬದಲಿಸಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಮೇ 9ರಂದು ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ಅಧಿಕೃತವಾಗಿ ರಚಿಸಲು ಮುಂದಾಗಿದೆ. ಇದೇ ದಿನ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯ ರಾಜಕೀಯದ ಗಮನ ಈ ಸಮಾರಂಭದತ್ತ ನೆಟ್ಟಿದೆ.
ಬಿಜೆಪಿ ರಾಜ್ಯ ಘಟಕದ ನಾಯಕತ್ವದ ಪ್ರಕಾರ, ರವೀಂದ್ರನಾಥ ಠಾಗೋರ್ ಅವರ ಜನ್ಮದಿನದಂದು ಸರ್ಕಾರ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಎನ್‌ಡಿಎ ಆಡಳಿತವಿರುವ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲು ಸಿದ್ಧತೆ ನಡೆದಿದೆ. ಇದರಿಂದ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಟ್ಟದ ಮಹತ್ವವೂ ಸಿಗಲಿದೆ.
ಇದನ್ನೂ ಓದಿ:
294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದ್ದರೆ, ಬಿಜೆಪಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸ್ಪಷ್ಟ ಜನಾದೇಶ ಪಡೆದಿದೆ. ಈ ಫಲಿತಾಂಶದೊಂದಿಗೆ ಮಮತಾ ಬ್ಯಾನರ್ಜಿ ನೇತೃತ್ವದ 15 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಂತಾಗಿದೆ.
ಈ ಗೆಲುವು ಬದಲಾವಣೆಯ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದು, ಮಹಿಳಾ ಮತದಾರರ ನಿರ್ಧಾರ, ಅಭಿವೃದ್ಧಿಯ ನಿರೀಕ್ಷೆ ಹಾಗೂ ಹಿಂಸಾಮುಕ್ತ ಆಡಳಿತದ ಆಶಯವೇ ಜನಾದೇಶದ ಹಿನ್ನಲೆ ಎಂದು ವಿಶ್ಲೇಷಿಸಿದ್ದಾರೆ. ಈಗ ಎಲ್ಲರ ಕಣ್ಣು ಬಂಗಾಳದ ಹೊಸ ಸರ್ಕಾರದ ಮೊದಲ ಹೆಜ್ಜೆಗಳತ್ತ ನೆಟ್ಟಿದೆ.



