May 9, 2026
Saturday, May 9, 2026
spot_img

ಮುಂಬೈಗೆ ಅಗ್ನಿಪರೀಕ್ಷೆ: ಹಾರ್ದಿಕ್​ಗೆ ಗಾಯ, ಸೂರ್ಯಕುಮಾರ್ ರಜೆ; ಹೊಸ ಕ್ಯಾಪ್ಟನ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ ಈ ಹಂತದಲ್ಲಿ ಪ್ರತಿಯೊಂದು ಪಂದ್ಯವೂ ನಿರ್ಣಾಯಕವಾಗುತ್ತಿರುವಾಗ, ಮುಂಬೈ ಇಂಡಿಯನ್ಸ್‌ಗೆ ಮುಂದಿನ ಮುಖಾಮುಖಿ ಮಾಡು ಇಲ್ಲವೇ ಮಡಿ ಎಂಬ ಹೋರಾಟವಾಗಿ ಪರಿಣಮಿಸಿದೆ.

ಪ್ಲೇಆಫ್‌ ಆಸೆಯನ್ನು ಜೀವಂತವಾಗಿಡಬೇಕಾದರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದರೆ ಗೆಲುವಿನ ಒತ್ತಡದ ಜೊತೆಗೆ ನಾಯಕತ್ವದ ಪ್ರಶ್ನೆಯೂ ತಂಡದ ಚರ್ಚೆಯ ಕೇಂದ್ರಬಿಂದುವಾಗಿದೆ.

ಈ ಋತುವಿನಲ್ಲಿ ಮುಂಬೈ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. 10 ಪಂದ್ಯಗಳಲ್ಲಿ ಕೇವಲ 3 ಗೆಲುವು ಮಾತ್ರ ದಾಖಲಿಸಿರುವ ತಂಡ, ಈಗ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ. ಆದರೂ 14 ಅಂಕ ತಲುಪಿದರೂ ಪ್ಲೇಆಫ್‌ ಪ್ರವೇಶಕ್ಕೆ ಇತರ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:

ಇನ್ನೊಂದೆಡೆ, ನಾಯಕ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್‌ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಬೆನ್ನಿನ ಗಾಯದಿಂದ ಬಳಲುತ್ತಿದ್ದ ಅವರು ತಂಡವನ್ನು ಸೇರಿಕೊಂಡಿದ್ದರೂ, ವೈದ್ಯಕೀಯ ಪರೀಕ್ಷೆಯ ಬಳಿಕವೇ ಅಂತಿಮ ನಿರ್ಧಾರವಾಗಲಿದೆ. ತಾತ್ಕಾಲಿಕ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಕೂಡ ವೈಯಕ್ತಿಕ ಕಾರಣಗಳಿಂದ ಲಭ್ಯತೆ ಬಗ್ಗೆ ಅನುಮಾನ ಮೂಡಿಸಿದ್ದಾರೆ.

ಹೀಗಾಗಿ, ಹಾರ್ದಿಕ್ ಹಾಗೂ ಸೂರ್ಯ ಇಬ್ಬರೂ ಕಣಕ್ಕಿಳಿಯದಿದ್ದರೆ ಜಸ್ಪ್ರೀತ್ ಬುಮ್ರಾ ಅಥವಾ ತಿಲಕ್ ವರ್ಮಾ ನಾಯಕತ್ವ ವಹಿಸುವ ಸಾಧ್ಯತೆ ಇದೆ. ರಾಯ್‌ಪುರದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಸೋಲು ಕಂಡರೆ ಮುಂಬೈ ಪ್ಲೇಆಫ್‌ ಕನಸು ಬಹುತೇಕ ಅಂತ್ಯವಾಗಲಿದೆ. ಗೆಲುವು ಮಾತ್ರ ತಂಡಕ್ಕೆ ಹೊಸ ಭರವಸೆ ತುಂಬಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !