ಇಂದಿನ ಡಿಜಿಟಲ್ ಯುಗದಲ್ಲಿ ಲ್ಯಾಪ್‌ಟಾಪ್‌ಗಳು ನಮ್ಮ ವೃತ್ತಿಜೀವನ ಮತ್ತು ಶಿಕ್ಷಣದ ಅನಿವಾರ್ಯ ಅಂಗವಾಗಿಬಿಟ್ಟಿವೆ. ಕಚೇರಿ ಕೆಲಸ, ಆನ್‌ಲೈನ್ ಶಿಕ್ಷಣ ಅಥವಾ ಮನರಂಜನೆ—ಹೀಗೆ ಪ್ರತಿಯೊಂದಕ್ಕೂ ನಾವು ಗಂಟೆಗಟ್ಟಲೆ ಲ್ಯಾಪ್‌ಟಾಪ್ ಪರದೆಯ ಮುಂಭಾಗದಲ್ಲೇ ಕಾಲ ಕಳೆಯುತ್ತಿದ್ದೇವೆ. ಆದರೆ, ಈ ಸುದೀರ್ಘವಾದ ಸ್ಕ್ರೀನ್ ಟೈಮ್ ನಮಗೆ ಅರಿವಿಲ್ಲದಂತೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನು ಬೀರುತ್ತಿದೆ.
ಲ್ಯಾಪ್‌ಟಾಪ್ ಪರದೆಯಿಂದ ಹೊರಬರುವ ನೀಲಿ ಬೆಳಕು ಕಣ್ಣುಗಳ ದೃಷ್ಟಿಯನ್ನು ಮಂದಗೊಳಿಸುವುದಲ್ಲದೆ, ತಪ್ಪು ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಕುತ್ತಿಗೆ, ಹೆಗಲು ಮತ್ತು ಬೆನ್ನುಮೂಳೆಯ ದೀರ್ಘಕಾಲದ ನೋವುಗಳಿಗೆ ದಾರಿ ಮಾಡಿಕೊಡುತ್ತಿದೆ. ಇದರೊಂದಿಗೆ ನಿದ್ರಾಹೀನತೆ, ಮಾನಸಿಕ ಒತ್ತಡ ಮತ್ತು ದೈಹಿಕ ಶ್ರಮವಿಲ್ಲದ ಕಾರಣ ತೂಕ ಹೆಚ್ಚಾಗುವಿಕೆಯಂತಹ ಆಧುನಿಕ ಜೀವನಶೈಲಿಯ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಆದ್ದರಿಂದ, ತಂತ್ರಜ್ಞಾನದ ಬಳಕೆಯ ಜೊತೆಗೆ ಆರೋಗ್ಯದ ರಕ್ಷಣೆಗಾಗಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.
ಸೂಕ್ತ ಮುನ್ನೆಚ್ಚರಿಕೆ ಕ್ರಮಗಳು:
ಪ್ರತಿ 20 ನಿಮಿಷಗಳಿಗೊಮ್ಮೆ ಲ್ಯಾಪ್‌ಟಾಪ್ ನೋಡುವುದನ್ನು ನಿಲ್ಲಿಸಿ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಬೇಕು ಆಗಾ ಕಣ್ಣಿಗೆ ಸ್ವಲ್ಪ ವಿಶ್ರಾಂತಿ ದೊರೆಯುತ್ತದೆ.
ಪರದೆಯನ್ನು ನೋಡುವಾಗ ಪ್ರಜ್ಞಾಪೂರ್ವಕವಾಗಿ ಕಣ್ಣುಗಳನ್ನು ಪದೇ ಪದೇ ಮಿಟುಕಿಸಿ. ಇದು ಕಣ್ಣುಗಳು ಒಣಗದಂತೆ ತಡೆಯುತ್ತದೆ ಲ್ಯಾಪ್‌ಟಾಪ್‌ನ ನೀಲಿ ಬೆಳಕನ್ನು ತಡೆಯಲು ‘ಬ್ಲೂ ಕಟ್’ ಅಥವಾ ಆಂಟಿ-ಗ್ಲೇರ್ ಕನ್ನಡಕಗಳನ್ನು ಧರಿಸುವುದು ಉತ್ತಮ>
ಕೋಣೆಯ ಬೆಳಕಿಗೆ ತಕ್ಕಂತೆ ಲ್ಯಾಪ್‌ಟಾಪ್ ಬ್ರೈಟ್‌ನೆಸ್ ಇರಲಿ. ತೀರಾ ಕತ್ತಲೆಯಲ್ಲಿ ಅಥವಾ ಅತಿ ಹೆಚ್ಚು ಬ್ರೈಟ್‌ನೆಸ್ ಇಟ್ಟುಕೊಂಡು ಕೆಲಸ ಮಾಡಬೇಡಬಾರದು.
ಲ್ಯಾಪ್‌ಟಾಪ್‌ನ ಮೇಲ್ಭಾಗದ ಪರದೆಯು ನಿಮ್ಮ ಕಣ್ಣಿನ ನೇರಕ್ಕೆ ಅಥವಾ ಸ್ವಲ್ಪ ಕೆಳಗೆ ಇರಬೇಕು. ಇದಕ್ಕಾಗಿ ‘ಲ್ಯಾಪ್‌ಟಾಪ್ ಸ್ಟ್ಯಾಂಡ್’ ಬಳಸುವುದು ಒಳ್ಳೆಯದು.
ಕುಳಿತುಕೊಳ್ಳುವಾಗ ನಿಮ್ಮ ಬೆನ್ನು ನೇರವಾಗಿರಲಿ, ಮೊಣಕೈ ಮತ್ತು ಮೊಣಕಾಲುಗಳು 90 ಡಿಗ್ರಿ ಕೋನದಲ್ಲಿ ಮಡಚಿಕೊಂಡಿರಬೇಕು.
ಲ್ಯಾಪ್‌ಟಾಪ್ ಪರದೆಯು ನಿಮ್ಮ ಮುಖದಿಂದ ಕನಿಷ್ಠ20 ರಿಂದ 26 ಇಂಚುಗಳಷ್ಟು ದೂರದಲ್ಲಿರಬೇಕು. ಬೆನ್ನಿಗೆ ಉತ್ತಮ ಆಸರೆ ನೀಡುವ ಎರ್ಗೋನಾಮಿಕ್ ಕುರ್ಚಿಯನ್ನು ಬಳಸಬೇಕು.
ಸತತವಾಗಿ ಕುಳಿತುಕೊಳ್ಳಬಾರದು. ಪ್ರತಿ 50-60 ನಿಮಿಷಗಳಿಗೊಮ್ಮೆ ಸಣ್ಣದಾಗಿ ಎದ್ದು5 ನಿಮಿಷಗಳ ಕಾಲ ನಡೆದಾಡಬೇಕು ಹಾಗೂ ಕುತ್ತಿಗೆಯನ್ನು ಎಡ-ಬಲ ತಿರುಗಿಸುವುದು, ಹೆಗಲುಗಳನ್ನು ತಿರುಗಿಸುವುದು ಮತ್ತು ಕೈ ಮಣಿಕಟ್ಟುಗಳನ್ನು ತಿರುಗಿಸುವ ಸರಳ ವ್ಯಾಯಾಮಗಳನ್ನು ಸೀಟಿನಲ್ಲೇ ಮಾಡುವುದು ಉತ್ತಮ.



