ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಮೂರು ವರ್ಷಗಳಲ್ಲಿ ದೇಶ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ 1,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ.
ಈ ಕುರಿತು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಮಾಹಿತಿ ಬಹಿರಂಗಪಡಿಸಿದ್ದು, ನೈತಿಕ ನಿಯಮಗಳ ಉಲ್ಲಂಘನೆಗಳ ಆಧಾರದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಸರಿಯಾದ ನಡವಳಿಕೆ ಅನುಸರಿಸುವುದು ಮುಖ್ಯ. ಆದರೆ ಪ್ರತಿವರ್ಷ ನೂರಾರು ಉದ್ಯೋಗಿಗಳು ವಿವಿಧ ರೀತಿಯ ನಿಯಮ ಉಲ್ಲಂಘನೆಗಳಿಂದ ಕೆಲಸ ಕಳೆದುಕೊಳ್ಳುತ್ತಾರೆ. ಅದರಲ್ಲೂ ಹೆಚ್ಚಾಗಿ ವಸ್ತುಗಳ ಕಳ್ಳಸಾಗಣೆ, ಪ್ರಯಾಣಿಕರ ಹೆಚ್ಚುವರಿ ಸಾಮಾನುಗಳನ್ನು ಶುಲ್ಕವಿಲ್ಲದೆ ಸಾಗಿಸಲು ಅನುಮತಿ ನೀಡುವುದು, ಉದ್ಯೋಗಿಗಳ ಮನರಂಜನಾ ಪ್ರಯಾಣ ಯೋಜನೆ ದುರುಪಯೋಗಪಡಿಸಿಕೊಳ್ಳುವುದು ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆಗಳಲ್ಲಿ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ ಎಂದರು.
ಮಾರ್ಚ್ ತಿಂಗಳಲ್ಲಿ ಮನರಂಜನಾ ಪ್ರಯಾಣ ಯೋಜನೆಯನ್ನು ಅಧಿಕ ಪ್ರಮಾಣದಲ್ಲಿ ಉಲ್ಲಂಘಿಸಿದ್ದರು. ಮೂಲಗಳ ಪ್ರಕಾರ, 4,000 ಕ್ಕೂ ಹೆಚ್ಚು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ದಂಡ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ ಆರ್ಥಿಕ ಸವಾಲುಗಳು ಕೂಡ ಸಂಸ್ಥೆಯ ಮೇಲೆ ಹೊರೆಯಾಗಿದ್ದು, ಇದರಿಂದಲೂ ಸಿಬ್ಬಂದಿಗಳ ವಜಾಗೊಂಡಿದ್ದಾರೆ.ಪ್ರಸುತ್ತ ಮಧ್ಯಪ್ರಾಚ್ಯದ ಸಂಘರ್ಷಗಳು ಕೂಡ ಮುಂದಿನ ದಿನಗಳಲ್ಲಿ ವಿಮಾನಯಾನ ಕ್ಷೇತ್ರದ ಮೇಲೆ ಯಾವ ರೀತಿ ಪರಿಣಾಮ ಬೀಳಲಿದೆ ಎಂದು ಊಹಿಸಲು ಅಸಾಧ್ಯ. ಹೀಗಾಗಿ ಈ ಹಣಕಾಸು ವರ್ಷ ಅತ್ಯಂತ ಕಷ್ಟಕರವಾಗಬಹುದು ಎಂದು ಹೇಳಿದ್ದಾರೆ.



