ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ಮುಂದುವರಿಯುತ್ತಲ್ಲೇ ಇದೆ. ಅಮೆರಿಕ ಕಳುಹಿಸಿದ್ದ 14 ಅಂಶಗಳ ಕದನ ವಿರಾಮ ಪ್ರಸ್ತಾಪಕ್ಕೆ ಇರಾನ್ ತನ್ನದೇ ಆದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಇದು ಡೊನಾಲ್ಡ್ ಟ್ರಂಪ್ ಸಿಟ್ಟಿಗೆ ಕಾರಣವಾಗಿದೆ.
ಮಧ್ಯಪ್ರಾಚ್ಯದಲ್ಲಿ ಮತ್ತೆ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಅಮೆರಿಕ 14 ಅಂಶಗಳ ಕದನ ವಿರಾಮ ಪ್ರಸ್ತಾಪ ಮಂಡಿಸಿದೆ. ಆದರೆ ಇರಾನ್ ತನ್ನದೇ ಆದ ಪ್ರತ್ಯೇಕ ಷರತ್ತುಗಳನ್ನು ಮುಂದಿಟ್ಟಿದೆ. ಈ ಕರಡು ಪ್ರತಿಯನ್ನು ಓದಿದ ಟ್ರಂಪ್, ಇದು ಸ್ವೀಕಾರ್ಹವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇರಾನ್ ತನ್ನ ಪ್ರಸ್ತಾಪದಲ್ಲಿ, ತಕ್ಷಣವೇ ತನ್ನ ಮೇಲಿನ ಎಲ್ಲಾ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಹಿಂಪಡೆಯಬೇಕು. ಇರಾನ್‌ನ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ರದ್ದುಗೊಳಿಸಬೇಕು ಮತ್ತು ತೈಲ ರಫ್ತಿನ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂಬುದು ಬೇಡಿಕೆ ಮುಂದಿಟ್ಟಿದೆ.
ಇದರ ಜೊತೆಗೆ ಯುದ್ಧದ ಸಮಯದಲ್ಲಿ ಇರಾನ್‌ಗೆ ಉಂಟಾದ ಅಪಾರ ಹಾನಿಗಾಗಿ 270 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಯುದ್ಧ ಪರಿಹಾರವನ್ನು ನೀಡಬೇಕು ಎಂದು ಷರತ್ತು ವಿಧಿಸಿದೆ.
ಇರಾನ್‌ನ ಈ ಬೇಡಿಕೆಗಳು ಕಂಡು ಟ್ರಂಪ್ ಕೆರಳಿ ಕೆಂಡವಾಗಿದ್ದು, ಮತ್ತೆ ಯುದ್ಧವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಒಲವು ತೋರಿದೆ . ಈ ಮೂಲಕ ಕದನ ವಿರಾಮದ ಕನಸು ಭಗ್ನಗೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಯುದ್ಧದ ಕಾರ್ಮೋಡ ಅವರಿಸಲಿದೆ ಎಂಬ ಆತಂಕ ಜಗತ್ತಿಗೆ ಕಾಡುತ್ತಿದೆ.



