May 11, 2026
Monday, May 11, 2026
spot_img

ಯಾಕ್ರೀ ಇಂಗ್ಲಿಷು…? ಮಾಧ್ಯಮದವರ ಮುಂದೆ ಮರ್ಯಾದೆ ತೆಗೆಸಿಕೊಂಡ ಪಾಕ್ ಜನರಲ್: ಟ್ರೋಲರ್ಸ್ ಬಿಡ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಸೇನೆಯ ವಕ್ತಾರರೊಬ್ಬರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಇಂಗ್ಲಿಷ್ ಬಳಸಿದ್ದೇಕೆ ಎಂದು ಪ್ರಶ್ನಿಸಿದ್ದ ಪಾಕ್ ಸೇನಾ ವಕ್ತಾರರಿಗೆ ಈಗ ತಮ್ಮದೇ ದೇಶದ ಜನರಿಂದ ಟೀಕೆ ಎದುರಾಗಿದೆ.

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಒಂದು ವರ್ಷದ ಹಿನ್ನೆಲೆ ಭಾರತೀಯ ಸೇನೆ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿತ್ತು. ಈ ವೇಳೆ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ ಅಹ್ಮದ್ ಶರೀಫ್ ಚೌಧರಿ, ನಿಮಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಯಾರು ಹೇಳಿದರು? ವಿಶ್ವಕ್ಕೆ ನಿಮ್ಮ ಕಥನವನ್ನು ತಲುಪಿಸಲು ಇದನ್ನು ಮಾಡುತ್ತಿದ್ದೀರಾ? ಎಂದು ವ್ಯಂಗ್ಯವಾಗಿ ಕೇಳಿದ್ದರು.

ಆದರೆ ಈ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚೌಧರಿ ವಿರುದ್ಧವೇ ಟೀಕೆಗಳು ಆರಂಭವಾಗಿವೆ. ಪಾಕಿಸ್ತಾನ ಸೇನೆಯಲ್ಲೂ ಅಧಿಕೃತ ಸಂವಹನಕ್ಕೆ ಇಂಗ್ಲಿಷ್ ಹೆಚ್ಚಾಗಿ ಬಳಕೆಯಾಗುತ್ತದೆ ಎಂದು ಹಲವರು ನೆನಪಿಸಿದ್ದಾರೆ.

ನಿವೃತ್ತ ಸೇನಾ ಅಧಿಕಾರಿ ಆದಿಲ್ ಫಾರೂಕ್ ರಾಜಾ ಕೂಡ ಪ್ರತಿಕ್ರಿಯಿಸಿ, “ಗಾಜಿನ ಮನೆಯಲ್ಲಿ ಇರುವವರು ಕಲ್ಲು ಎಸೆಯಬಾರದು” ಎಂದು ಟೀಕಿಸಿದ್ದಾರೆ. ಪಾಕಿಸ್ತಾನ ಸೇನೆಯ ಒಳಾಂಗಣ ವ್ಯವಸ್ಥೆಯಲ್ಲೂ ಇಂಗ್ಲಿಷ್ ಪ್ರಮುಖ ಭಾಷೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಗೆ ಬಳಿಕ ಪಾಕ್ ಸೇನೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮತ್ತು ಟ್ರೋಲ್‌ಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !