October 14, 2026
Wednesday, October 14, 2026
spot_img

ಗ್ರಾಹಕರಿಗೆ ಅಮುಲ್ ಶಾಕ್: ದೇಶಾದ್ಯಂತ ಇಂದಿನಿಂದ ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ‘ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್’ (GCMMF), ಉತ್ಪಾದನಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಈ ನೂತನ ದರಗಳು ಇಂದಿನಿಂದಲೇ (ಮೇ 14) ಜಾರಿಗೆ ಬರಲಿದ್ದು, ಇದಕ್ಕೂ ಮುನ್ನ ಕೊನೆಯ ಬಾರಿಗೆ 2025ರ ಮೇ 1 ರಂದು ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿತ್ತು.

ಬೆಲೆ ಏರಿಕೆ ಕುರಿತು ಪ್ರಕಟಣೆ ಹೊರಡಿಸಿರುವ GCMMF, ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ತನ್ನ ಎಲ್ಲಾ ಪ್ರಮುಖ ತಳಿಯ ತಾಜಾ ಹಾಲಿನ ಪಾಕೆಟ್‌ಗಳ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಮೇ 14 ರಿಂದಲೇ ಹೊಸ ದರಗಳು ಅನ್ವಯವಾಗಲಿವೆ ಎಂದು ತಿಳಿಸಿದೆ.

ಈ ಬೆಲೆ ಏರಿಕೆಯು ಪ್ರತಿ ಲೀಟರ್‌ಗೆ ಸರಿಸುಮಾರು ಶೇ. 2.5 ರಿಂದ 3.5 ರಷ್ಟಾಗಲಿದ್ದು, ಇದು ದೇಶದ ಸರಾಸರಿ ಆಹಾರ ಹಣದುಬ್ಬರ ದರಕ್ಕಿಂತ ಕಡಿಮೆಯಾಗಿದೆ ಎಂದು ಒಕ್ಕೂಟ ಹೇಳಿದೆ.

ಹಾಲಿನ ಒಟ್ಟಾರೆ ಉತ್ಪಾದನೆ ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷದಲ್ಲಿ ದನಗಳ ಮೇವು, ಹಾಲಿನ ಪ್ಯಾಕೇಜಿಂಗ್ ಫಿಲ್ಮ್ (ಪ್ಲಾಸ್ಟಿಕ್ ಕವರ್) ಮತ್ತು ಇಂಧನ ವೆಚ್ಚ ಗಣನೀಯವಾಗಿ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗಿದೆ ಎಂದು GCMMF ತಿಳಿಸಿದೆ.

ಇದಲ್ಲದೆ, ತನ್ನ ಸಹಕಾರಿ ಒಕ್ಕೂಟಗಳು ರೈತರಿಂದ ಹಾಲು ಖರೀದಿಸುವ ಸಂಗ್ರಹಣಾ ಬೆಲೆಯನ್ನು ಪ್ರತಿ ಕೆಜಿ ಫ್ಯಾಟ್ ಗೆ 30 ರೂ.ಗಳಷ್ಟು ಹೆಚ್ಚಿಸಿವೆ ಎಂದು ಸಂಸ್ಥೆ ತಿಳಿಸಿದ್ದು, ಇದು ಮೇ 2025 ಕ್ಕೆ ಹೋಲಿಸಿದರೆ ಶೇಕಡಾ 3.7 ರಷ್ಟು ಹೆಚ್ಚಳವಾಗಿದೆ.

Must Read