ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 3 ರೂಪಾಯಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿಯಾಗಿದೆ ಎಂದು ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರವು ತನ್ನ ಆಡಳಿತದ ವೈಫಲ್ಯಗಳನ್ನು ಮುಚ್ಚಿಡಲು ಸಾರ್ವಜನಿಕರ ಮೇಲೆ ಪ್ರಹಾರ ಮಾಡುತ್ತಿದೆ. ಜನಹಿತ ಕಾಯುವ ಬದಲು, ಅವರಿಂದಲೇ ಹಣ ಕಿತ್ತುಕೊಂಡು ಸರ್ಕಾರ ನಷ್ಟ ಭರಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ 3 ರೂ. ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿಯಾಗಿದೆ. ಕೇಂದ್ರ ಸರ್ಕಾರವು ತನ್ನ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ನಿರ್ವಹಣೆಯ ಪರಿಣಾಮಗಳನ್ನು ಬಲವಂತವಾಗಿ ದೇಶದ ಜನತೆಯ ತಲೆಯ ಮೇಲೆ ಹೇರುತ್ತಿದೆ. ದೇಶದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಅವರಿಂದಲೇ ಹಣ ಕಿತ್ತುಕೊಂಡು ತನ್ನ ವೈಫಲ್ಯದ ನಷ್ಟ ಭರಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀ. ಗೆ106 ರೂ. ದಾಟಿದೆ. ಡೀಸೆಲ್ ದರವು 94 ರೂ. ಆಗಿದೆ. ಈ ಏರಿಕೆಯು ಕೇವಲ ಬಂಕ್‌ಗಳಿಗೆ ಸೀಮಿತಗೊಳ್ಳುವುದಿಲ್ಲ. ಇದರಿಂದ ಸಾರಿಗೆ ವೆಚ್ಚ, ತರಕಾರಿ, ಹಣ್ಣು, ಹಾಲು, ಸೇರಿದಂತೆ ಪ್ರತಿಯೊಂದು ದಿನಬಳಕೆ ವಸ್ತುಗಳ ದರ ಏರಿಕೆಯಾಗುತ್ತದೆ. ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮನೆಯ ಜವಾಬ್ದಾರಿ ಹೊತ್ತ ಮಹಿಳೆಯರು ಹಾಗೂ ಮಧ್ಯಮ ವರ್ಗದವರು ದೈನಂದಿನ ಬದುಕು ನಡೆಸುವುದು ಮತ್ತಷ್ಟು ದುಸ್ತರವಾಗಲಿದೆ ಎಂದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ಕಡಿಮೆಯಾದಾಗ ಮೋದಿ ಸರ್ಕಾರ ಅದರ ಲಾಭವನ್ನು ಜನತೆಗೆ ಬಿಟ್ಟುಕೊಡಲೇ ಇಲ್ಲ. ಜನತೆಯಿಂದ ದೊಡ್ಡ ಮೊತ್ತದ ತೆರಿಗೆಯನ್ನು ಸಂಗ್ರಹಿಸಿ ತನ್ನ ಬೊಕ್ಕಸವನ್ನು ತುಂಬಿಕೊಂಡಿತ್ತು. ಇದೀಗ ದರ ಏರಿಕೆಯಾದಾಗ ಅದರ ಸಂಪೂರ್ಣ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಿದೆ. ಇದು ಆಡಳಿತ ನಡೆಸುವ ಕ್ರಮವಲ್ಲ, ಇದು ದೇಶದ ಜನತೆಯ ಮೇಲಿನ ಘೋರ ಶೋಷಣೆಯಾಗಿದೆ ಎಂದು ಟೀಕಿಸಿದರು.
ಕೇಂದ್ರದ ಜನವಿರೋಧಿ ನಡೆಯನ್ನು ನಾನು ಕಠಿಣವಾಗಿ ವಿರೋಧಿಸುತ್ತಿದ್ದೇನೆ. ತಕ್ಷಣವೇ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ನಿರಂತರವಾಗಿ ಬೀಳುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕ ನಿರ್ವಹಣೆಯ ವೈಫಲ್ಯ ಮತ್ತು ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆಯನ್ನು ಹೊತ್ತು ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.



