ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಜಾಗತಿಕ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಐದು ರಾಷ್ಟ್ರಗಳ ಪ್ರಮುಖ ಪ್ರವಾಸವನ್ನು ಕೈಗೊಂಡಿದ್ದಾರೆ. ತಮ್ಮ ಈ ರಾಜತಾಂತ್ರಿಕ ಪ್ರವಾಸದ ಭಾಗವಾಗಿ ಪ್ರಧಾನಿಯವರು ನೆದರ್ಲೆಂಡ್ಸ್‌ಗೆ ಅಧಿಕೃತ ಭೇಟಿ ನೀಡಿದ್ದಾರೆ. ಮೇ 15 ರಿಂದ 17 ರವರೆಗೆ ನಡೆಯಲಿರುವ ಈ ಯುರೋಪ್ ಪ್ರವಾಸವು 2017ರ ನಂತರ ಪಿಎಂ ಮೋದಿ ಅವರ ಎರಡನೇ ಭೇಟಿಯಾಗಿದ್ದು, ಉಭಯ ದೇಶಗಳ ಬಾಂಧವ್ಯದಲ್ಲಿ ಅತ್ಯಂತ ಮಹತ್ವದ ಘಟ್ಟ ಎಂದು ಪರಿಗಣಿಸಲಾಗಿದೆ.
ನೆದರ್ಲೆಂಡ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಅಲ್ಲಿನ ಪ್ರಧಾನಿ ರಾಬ್ ಜೆಟ್ಟನ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಜಾಗತಿಕ ಪೂರೈಕೆ ಸರಪಳಿ ಮತ್ತು ವ್ಯಾಪಾರ ಕ್ಷೇತ್ರಕ್ಕಾಗುತ್ತಿರುವ ಅಡೆತಡೆಗಳನ್ನು ನಿವಾರಿಸುವ ಕುರಿತು ಉಭಯ ನಾಯಕರು ಗಂಭೀರ ಸಮಾಲೋಚನೆ ನಡೆಸಿದ್ದಾರೆ. ಇದರೊಂದಿಗೆ ರಕ್ಷಣೆ, ತಂತ್ರಜ್ಞಾನ, ಜಾಗತಿಕ ವ್ಯಾಪಾರ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ.
ಈ ಪ್ರವಾಸದ ಕುರಿತು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯವು, ಪಶ್ಚಿಮ ಏಷ್ಯಾದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ನಡುವೆ ಈ ಭೇಟಿ ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸಿದೆ. ಜಾಗತಿಕ ಭದ್ರತೆ ಹಾಗೂ ಭಾರತ-ನೆದರ್ಲೆಂಡ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಅರೆವಾಹಕಗಳು, ನಾವೀನ್ಯತೆ, ಹೂಡಿಕೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸಹಕಾರ ಗಣನೀಯವಾಗಿ ವೃದ್ಧಿಸಿದೆ.



