ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಸಂಚಲನ ಮೂಡಿಸಿದ 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ನಕಲಿ ಐಟಿಸಿ ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೇದಿಸಿದ್ದಾರೆ. ಇದೀಗ ತನಿಖೆಯ ಭಾಗವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ಪ್ರಸಿದ್ಧ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಗೆ ಇಲಾಖೆಯು ನೊಟೀಸ್ ಜಾರಿ ಮಾಡಿದೆ.
ನಕಲಿ ಬಿಲ್‌ಗಳ ಸಾಗಾಟಕ್ಕೆ ನ್ಯಾಷನಲ್ ಟ್ರಾವೆಲ್ಸ್ ಗೆ ಸೇರಿದ್ದ ಲಾರಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ಆರೋಪವಿದ್ದು, ಹೀಗಾಗಿ ಐಟಿ ನೋಟೀಸ್ ನೀಡಿದೆ.
ಸ್ಕ್ರಾಪ್ ಸಾಗಾಟದ ಹೆಸರಿನಲ್ಲಿ ವಂಚಕರು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಎಸಗುತ್ತಿದ್ದರು. ಇದರ ಸಾಗಾಟಕ್ಕಾಗಿ ಹಾಗೂ ನಕಲಿ ವ್ಯವಹಾರಗಳ ದೃಢೀಕರಣಕ್ಕಾಗಿ ಸಚಿವ ಜಮೀರ್ ಖಾನ್ ಗೆ ಸೇರಿದ್ದ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಯ ಲಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆಯ ಒಟ್ಟು ಮೊತ್ತ ಬರೋಬ್ಬರಿ ಎರಡು ಸಾವಿರ ಕೋಟಿ ರೂಪಾಯಿಗಳಾಗಿದ್ದು, ಇದುವರೆಗೆ ಏಳು ಜನ ಪ್ರಮುಖ ವಂಚಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.



