ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ ಮಹತ್ವದ ತೀರ್ಪು ನೀಡಿದೆ. ಈ ಆದೇಶದೊಂದಿಗೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.
2018ರ ಪ್ರಶ್ನೆಗೆ ಸಿಕ್ಕಿತು ಉತ್ತರ
2018ರಲ್ಲಿ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯ ಹಿನ್ನೆಲೆಯಲ್ಲಿ ಈ ವಿವಾದ ಆರಂಭವಾಗಿತ್ತು. ಬಿಸಿಸಿಐಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ್ದ ಅರ್ಜಿದಾರರಿಗೆ ಕ್ರೀಡಾ ಸಚಿವಾಲಯ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿತ್ತು. ಬಳಿಕ ಪ್ರಕರಣ ಕೇಂದ್ರ ಮಾಹಿತಿ ಆಯೋಗದ ಮೆಟ್ಟಿಲೇರಿತ್ತು. ಆರಂಭದಲ್ಲಿ ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಲಾಗಿದ್ದರೂ, ಬಿಸಿಸಿಐ ಇದನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಇದನ್ನೂ ಓದಿ:
ತಮ್ಮನ್ನು ಸರ್ಕಾರದ ಧನಸಹಾಯ ಪಡೆಯದ ಖಾಸಗಿ ಸ್ವಾಯತ್ತ ಸಂಸ್ಥೆ ಎಂದು ಬಿಸಿಸಿಐ ವಾದಿಸಿತ್ತು. ಆಡಳಿತ, ಹಣಕಾಸು ಹಾಗೂ ನಿರ್ವಹಣೆಯಲ್ಲಿ ಸರ್ಕಾರದ ಯಾವುದೇ ನೇರ ನಿಯಂತ್ರಣ ಇಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿತ್ತು. ಪ್ರಸಾರ ಹಕ್ಕು, ಪ್ರಾಯೋಜಕತ್ವ ಹಾಗೂ ಟಿಕೆಟ್ ಮಾರಾಟದಿಂದಲೇ ಆದಾಯ ಬರುತ್ತದೆ ಎಂಬ ಅಂಶವನ್ನೂ ಉಲ್ಲೇಖಿಸಲಾಗಿತ್ತು.
‘ಪಬ್ಲಿಕ್ ಅಥಾರಿಟಿ’ ಅಲ್ಲ
ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದ ಕೇಂದ್ರ ಮಾಹಿತಿ ಆಯೋಗ, ಬಿಸಿಸಿಐ ‘ಪಬ್ಲಿಕ್ ಅಥಾರಿಟಿ’ ಅಲ್ಲ ಎಂದು ಘೋಷಿಸಿದೆ. ಇದರಿಂದ ಮಂಡಳಿಯ ಆಂತರಿಕ ಹಣಕಾಸು ಮತ್ತು ಆಡಳಿತಾತ್ಮಕ ದಾಖಲೆಗಳು ಸಾರ್ವಜನಿಕರಿಗೆ ಆರ್‌ಟಿಐ ಮೂಲಕ ಲಭ್ಯವಾಗುವುದಿಲ್ಲ. ಆದರೆ ಪಾರದರ್ಶಕತೆ ಪರ ಹೋರಾಟ ನಡೆಸುತ್ತಿರುವ ಕಾರ್ಯಕರ್ತರು ಈ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



