ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಕಾಮೀ ರೀತಾ ಶೆರ್ಪಾ ವಿಶ್ವದ ಅತೀ ಎತ್ತರದ ಪರ್ವತ ‘ಮೌಂಟ್ ಎವರೆಸ್ಟ್’ನ ತುದಿಯನ್ನು 32ನೇ ಬಾರಿ ಹತ್ತುವ ಮೂಲಕ ತಮ್ಮದೇ ಹೆಸರಲ್ಲಿದ್ದ ‘ಅತಿಹೆಚ್ಚು ಬಾರಿ ಎವರೆಸ್ಟ್ ಹತ್ತಿದವರು’ ಎಂಬ ದಾಖಲೆ ಮುರಿದಿದ್ದಾರೆ.
14 ಪೀಕ್ಸ್ ಎಕ್ಸ್ಪೆಡಿಷನ್ ಎಂಬ ಕಂಪನಿ ಆಯೋಜಿಸಿದ್ದ ಪರ್ವತಾರೋಹಣದ ತಂಡದ ನಾಯಕರಾಗಿದ್ದ ಶೆರ್ಪಾ, ಭಾನುವಾರ ಬೆಳಗ್ಗೆ 29,032 ಅಡಿ ಎತ್ತರದ ‘ಮೌಂಟ್ ಎವರೆಸ್ಟ್ ಅನ್ನು ಏರಿ ಸಾಧನೆ ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.
ತಮ್ಮ ದಾಖಲೆಯನ್ನೇ ಮುರಿದ ಶೆರ್ಪಾ
ನೇಪಾಳದ ಕೋಶಿ ಪ್ರಾಂತ್ಯದ ಸೋಲುಖುಂಬು ಜಿಲ್ಲೆಯ ಕಾಮೀ ರೀತಾ ಅವರು 1992 ರಿಂದ ಶಿಖರವನ್ನು ಏರಲು ಆರಂಭಿಸಿದರು. 1994ರಲ್ಲಿ ಮೊದಲ ಬಾರಿ ಮೌಂಟ್ ಎವರೆಸ್ಟ್ ಹತ್ತಿದ ರೀತಾ, 2025ರ ಮೇ 27ರಂದು 31ನೇ ಬಾರಿ ಏರಿದ್ದರು. ಇದೀಗ ಮತ್ತೊಮ್ಮೆ ಹತ್ತುವ ಮೂಲಕ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ.
‘ಮೌಂಟೇನ್ ಕ್ವೀನ್’ ಲಕ್ಪಾ ಶರ್ಪಾ
ನೇಪಾಳದ ‘ಮೌಂಟೇನ್ ಕ್ವೀನ್’ ಎಂದೇ ಕರೆಯಲ್ಪಡುವ 52 ವರ್ಷದ ಲಕ್ಪಾ ಶರ್ಪಾ ಅವರು 11ನೇ ಬಾರಿಗೆ ಎವರೆಸ್ಟ್ ಶಿಖರವನ್ನು ಏರುವ ಮೂಲಕ ಮಹಿಳಾ ವಿಭಾಗದಲ್ಲಿ ತಮ್ಮದೇ ಈ ಹಿಂದಿನ ದಾಖಲೆಯನ್ನೇ ಮುರಿದಿದ್ದಾರೆ. 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಎವರೆಸ್ಟ್ ಏರಿದ ಅವರು, ನೇಪಾಳದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ನೇಪಾಳ ಪ್ರಧಾನಿಯಿಂದ ಅಭಿನಂದನೆ
ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ,ರೀತಾ ಮತ್ತು ಲಕ್ಪಾ ಅವರ ಸಾಧನೆಯನ್ನು ಅಭಿನಂದಿಸಿದ್ದು, ಸಾಹಸ, ಧೈರ್ಯ, ಕಠಿಣ ಸ್ವಯಂ ಶಿಸ್ತಿನಿಂದ ಈ ಸಾಧನೆ ಸಾಧ್ಯ ಎಂದಿದ್ದಾರೆ.



