ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ಧ ಪರಿಸ್ಥಿತಿಯನ್ನು ಶಮನಗೊಳಿಸಲು ನಡೆಯುತ್ತಿರುವ ಶಾಂತಿ ಮಾತುಕತೆಗಳ ನಡುವೆ ಅಮೆರಿಕ, ಇರಾನ್ ಮುಂದಿಟ್ಟಿರುವ ಕೆಲವು ಪ್ರಮುಖ ಷರತ್ತುಗಳು ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಈ ಮೂಲಕ ಮಾತುಕತೆ ಮುಂದುವರಿದರೂ, ಉಭಯ ದೇಶಗಳ ನಡುವಿನ ಅನುಮಾನ ಮತ್ತು ಒತ್ತಡ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಯುರೇನಿಯಂ ಸಂಗ್ರಹ ನಮ್ಮ ವಶಕ್ಕೆ ಒಪ್ಪಿಸಿ
ಇರಾನ್ ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದರಲ್ಲೂ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಅಮೆರಿಕದ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿದೆ ಎನ್ನಲಾಗಿದೆ. ಜೊತೆಗೆ ಇರಾನ್‌ನ ಒಂದು ಪರಮಾಣು ಕೇಂದ್ರ ಮಾತ್ರ ಕಾರ್ಯನಿರ್ವಹಿಸಬೇಕು ಎಂಬ ಷರತ್ತನ್ನೂ ವಿಧಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಹಿಂದಿನ ನಿರ್ಬಂಧಗಳಿಂದ ಉಂಟಾದ ನಷ್ಟಗಳಿಗೆ ಯಾವುದೇ ಪರಿಹಾರ ನೀಡಲು ಅಮೆರಿಕ ನಿರಾಕರಿಸಿದೆ ಎಂದು ವರದಿಯಾಗಿದೆ. ಅಲ್ಲದೇ ಇರಾನ್‌ಗೆ ಸೇರಿದ ವಿದೇಶಿ ಆಸ್ತಿಗಳ ಭಾಗಶಃ ಬಿಡುಗಡೆಗೂ ಒಪ್ಪಿಗೆ ಸಿಕ್ಕಿಲ್ಲ ಎನ್ನಲಾಗಿದೆ.
ಹಾರ್ಮುಜ್ ಮೇಲಿನ ಹಕ್ಕು ಪುನರುಚ್ಚರಿಸಿದ ಇರಾನ್
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್, ತನ್ನ ಮೇಲೆ ಇರುವ ಆರ್ಥಿಕ ನಿರ್ಬಂಧ ತೆರವು ಮತ್ತು ವಶದಲ್ಲಿರುವ ನಿಧಿ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಹಕ್ಕನ್ನೂ ಇರಾನ್ ಪುನರುಚ್ಚರಿಸಿದೆ.
ಇದೇ ವೇಳೆ, ಅಮೆರಿಕ ಹೊಸ ಸೇನಾ ಕ್ರಮ ಕೈಗೊಂಡರೆ ತೀವ್ರ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಇರಾನ್ ಸೇನಾ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.



