May 19, 2026
Tuesday, May 19, 2026
spot_img

ಆನೆ ಶಿಬಿರದ ದುರಂತಕ್ಕೆ ಅರಣ್ಯಾಧಿಕಾರಿಗಳು-ಸಿಬ್ಬಂದಿ ಹೊಣೆ: ಕರ್ನಾಟಕ ಕಾವಲುಪಡೆ

ಹೊಸದಿಗಂತ ವರದಿ ಕುಶಾಲನಗರ:

ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ನಡೆದ ಘಟನೆಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳೇ ಹೊಣೆಗಾರರಾಗಿದ್ದು ಅವರ ಮೇಲೆ ಸೂಕ್ತ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ ಕೃಷ್ಣ ಒತ್ತಾಯಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ತುಂಬಾ ದುಃಖಕರ ವಿಚಾರ. ಪ್ರವಾಸಿಗರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರಲ್ಲದೆ, ಪ್ರವಾಸಿಗರಿಂದ ಆನೆಗೆ ಸ್ನಾನ ಮಾಡಿಸುವುದು, ಆನೆಗೆ ಆಹಾರ ತಿನ್ನಿಸುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಘಟನೆಗೆ ನೇರ ಕಾರಣಕರ್ತರಾಗಿದ್ದಾರೆ ಎಂದು ದೂರಿದರು.

ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿದೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕನಿಷ್ಟ ವಾರಕ್ಕೊಮ್ಮೆಯಾದರೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಬೇಕು. ಇದರೊಂದಿಗೆ ಪ್ರವಾಸಿಗರು ಕೂಡಾ ದುಸ್ಸಾಹಸಕ್ಕೆ ಕೈ ಹಾಕಿ ತಮ್ಮ ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂದು ಕೃಷ್ಣ ಕಿವಿಮಾತು ಹೇಳಿದರು.

ಕುಶಾಲನಗರದ ದುಬಾರೆ, ಕಾವೇರಿ ನಿಸರ್ಗಧಾಮ ಪ್ರವಾಸಿ ತಾಣಗಳ ಹಲವೆಡೆ, ನದಿ ತಟದಲ್ಲಿ ನಿಯಮಬಾಹಿರವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿರುವುದು ಕಂಡು ಬಂದಿದೆ.ಈ ಬಗ್ಗೆ ತಕ್ಷಣ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪ್ರವಾಸಿ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಅವರು ನುಡಿದರು.

ಇದೇ ಸಂದರ್ಭ ಮಾತನಾಡಿದ ಕಾವಲು ಪಡೆ ತಾಲೂಕು ಅಧ್ಯಕ್ಷ ಸಮೀರ್, ಕುಶಾಲನಗರ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಅಲ್ಲಿನ ವೈದ್ಯರು ಮಡಿಕೇರಿ ಅಥವಾ ಮೈಸೂರಿಗೆ ತೆರಳಲು ಸೂಚಿಸುತ್ತಿದ್ದು, ಇದರಿಂದ ಬಡ ರೋಗಿಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಹೇಳಿದರಲ್ಲದೆ, ಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾವಲು ಪಡೆಯ ಯುವ ಘಟಕದ ಅಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಮಧು ಸದಸ್ಯ ಜಾಫರ್ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !