June 28, 2026
Sunday, June 28, 2026
spot_img

ಆಕಾಶದ ಕಗ್ಗತ್ತಲೆಗೆ ಹೆದರಿದ ಪ್ರಯಾಣಿಕರು, ಗಾಳಿ-ಬೆಳಕಿಲ್ಲದೆ ಗಂಟೆಗಟ್ಟಲೆ ಒದ್ದಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇ 17 ರ ರಾತ್ರಿ (ಭಾನುವಾರ) ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಭಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸುಮಾರು 160 ಪ್ರಯಾಣಿಕರು ಯಾವುದೇ ಬೆಳಕಿಲ್ಲದೆ, ಎಸಿ (AC) ಇಲ್ಲದೆ ಅರ್ಧ ಗಂಟೆಯ ಕಾಲ ಕತ್ತಲಲ್ಲಿ ಬೆವತು ಸುರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನೆಲದ ವಿದ್ಯುತ್ ಘಟಕ (GPU) ಸ್ಥಗಿತ:

ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನ ‘6E 657’ ರಾತ್ರಿ 8:40 ಕ್ಕೆ ಹೊರಡಲು ಸಿದ್ಧವಾಗಿತ್ತು. ಈ ಸಮಯದಲ್ಲಿ ವಿಮಾನವು ರನ್‌ವೇನಲ್ಲಿ ಚಲಿಸುವ ಮುನ್ನ ಅಗತ್ಯವಿರುವ ವಿದ್ಯುತ್ ಪೂರೈಕೆಯನ್ನು ವಿಮಾನ ನಿಲ್ದಾಣದ ನೆಲದ ವಿದ್ಯುತ್ ಘಟಕದಿಂದ ಪಡೆಯುತ್ತಿತ್ತು. ಆದರೆ ವಿಮಾನ ಹೊರಡುವ ಕೆಲವೇ ಕ್ಷಣಗಳ ಮುನ್ನ ಈ ಜಿಪಿಯು (GPU) ಸಾಧನ ದಿಢೀರ್ ಸ್ಥಗಿತಗೊಂಡಿತು.

ಅರ್ಧ ಗಂಟೆ ಕಾಲ ನರಕಯಾತನೆ:

ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಎಂಜಿನಿಯರ್‌ಗಳು ಜಿಪಿಯುನಲ್ಲಿದ್ದ ದೋಷವನ್ನು ಸರಿಪಡಿಸಲು 12 ರಿಂದ 15 ನಿಮಿಷಗಳನ್ನು ತೆಗೆದುಕೊಂಡರು. ಆ ಬಳಿಕ ವಿಮಾನಕ್ಕೆ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಇನ್ನು 15 ನಿಮಿಷಗಳು ಬೇಕಾಯಿತು. ಈ 30 ನಿಮಿಷಗಳ ಅವಧಿಯಲ್ಲಿ ವಿಮಾನದ ಕ್ಯಾಬಿನ್ ಸಂಪೂರ್ಣ ಕತ್ತಲೆಯಿಂದ ಕೂಡಿತ್ತು. ಎಸಿ ಕೂಡ ಕೆಲಸ ಮಾಡದ ಕಾರಣ ವಿಮಾನದ ಒಳಗಿದ್ದ ಸುಮಾರು 160 ಪ್ರಯಾಣಿಕರು ತೀವ್ರ ಉಸಿರಾಟದ ತೊಂದರೆ ಅನುಭವಿಸಿ, ಬೆವತು ಹೋದರು ಎಂದು ಅವರು ತಿಳಿಸಿದ್ದಾರೆ.

ಒಂದೂವರೆ ಗಂಟೆ ತಡವಾಗಿ ಹೊರಟ ವಿಮಾನ

ಸಾಮಾನ್ಯವಾಗಿ ವಿಮಾನವು ಪಾರ್ಕಿಂಗ್ ಗೇಟ್‌ನಲ್ಲಿ ನಿಂತಾಗ ಅದರ ದೀಪಗಳು, ಎಸಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಚಲಿಸಲು ಈ ಜಿಪಿಯು (GPU) ವಿದ್ಯುತ್ ನೀಡುತ್ತದೆ. ಈ ಘಟನೆಯಿಂದಾಗಿ ರಾತ್ರಿ 8:40 ಕ್ಕೆ ಹೊರಡಬೇಕಿದ್ದ ವಿಮಾನವು ಸುಮಾರು 1 ಗಂಟೆ 20 ನಿಮಿಷಗಳ ಕಾಲ ತಡವಾಗಿ, ರಾತ್ರಿ 10 ಗಂಟೆಗೆ ದೆಹಲಿಗೆ ರವಾನೆಯಾಯಿತು. ಈ ಭಾರಿ ಆಡಳಿತಾತ್ಮಕ ಲೋಪದ ಕುರಿತು ಇಂಡಿಗೋ ಸಂಸ್ಥೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !