May 19, 2026
Tuesday, May 19, 2026
spot_img

23 ಕೋಟಿ ಹಣ ವಂಚನೆ ಆರೋಪ: ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ, ಅಧಿಕಾರಿಗಳ ಮನೆಗೆ ಲೋಕಾ ದಾಳಿ

ಹೊಸದಿಗಂತ ವರದಿ, ಬೆಳಗಾವಿ:

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಕೊಳೆಗೇರಿಯಲ್ಲಿ 600 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಖೊಟ್ಟಿ ದಾಖಲೆ ಸೃಷ್ಟಿಸಿ 23.35 ಕೋಟಿ ಹಣ ಲಪಟಾಯಿಸಿದ ಆರೋಪದಡಿ, ಇಲ್ಲಿನ ಕುವೆಂಪು ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಚೇರಿ, ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿದರು.

ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ನಿವೃತ್ತ) ಬಿ.ಎಸ್. ಶಂಭುಲಿಂಗಪ್ಪ ಹಾಗೂ ಗುತ್ತಿಗೆದಾರ ಎನ್‌.ಪಿ.ಪ್ರಸಾದ್‌ ಸೇರಿ ಕೃತ್ಯದಲ್ಲಿ ಪಾಲ್ಗೊಂಡ ಇತರರ ವಿರುದ್ಧ ಲೋಕಾಯುಕ್ತ ಪಿಎಸ್‌ಐ ಪ್ರಸನ್ನ ದೇಸಾಯಿ ದೂರು ದಾಖಲಿಸಿದರು. ಇನ್‌ಸ್ಪೆಕ್ಟರ್‌ ಎಸ್.ಎಚ್. ಹೊಸಮನಿ ಅವರ ನೇತೃತ್ವದಲ್ಲಿ ದಾಳಿ ಮಾಡಿದರು.

ನಕಲಿ ದಾಖಲೆ ತೋರಿಸಿ ವಂಚನೆ

‘ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಸರ್ವರಿಗೂ ಸೂರು (ನಗರ)–2022 ಕಾರ್ಯಕ್ರಮದಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ದಾಖಲೆ ತೋರಿಸಿ, ಅನುದಾನ ‍ಪಡೆಯಲಾಗಿದೆ. ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಗುತ್ತಿಗೆದಾರ ಸೇರಿ ಈ ಸಂಚು ರೂಪಿಸಿ ಹಣ ‍ಪಡೆದಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಹಣಮಂತರಾಯ ಮಾಹಿತಿ ನೀಡಿದರು.

ಸ್ಥಳ ಪರಿಶೀಲನೆಯಲ್ಲಿ ಅಸಲಿಯತ್ತು ಬಯಲು

2019 ರಿಂದ 2024ರವರೆಗೆ ವಿವಿಧ ಹಂತಗಳಲ್ಲಿ ₹29.45 ಕೋಟಿ ಬಿಲ್‌ ತೆಗೆಯಲಾಗಿದೆ. ಸಿಮೆಂಟ್‌, ಕಬ್ಬಿಣ, ಇಟ್ಟಿಗೆ ಮುಂತಾದ ಗೃಹ ನಿರ್ಮಾಣ ಸಾಮಗ್ರಿಗಳಿಗೆ ₹6.10 ಕೋಟಿ ವೆಚ್ಚ ಮಾಡಲಾಗಿದೆ. 600 ಫಲಾನುಭವಿಗಳಿಗೆ ತಲಾ ₹1.10 ಲಕ್ಷ ಹಣ ಸಂದಾಯ ಮಾಡಿ ನೀವೇ ಮನೆ ಕಟ್ಟಿಕೊಳ್ಳಬೇಕು ನಿಯಮಬಾಹಿರ ಕ್ರಮವಹಿಸಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ಕಾಮಗಾರಿ ಮಾಡಿಲ್ಲ. ಜಿಪಿಎಸ್‌ ಇಲ್ಲದೆಯೇ, ಕಾಮಗಾರಿ ಮುಗಿಸಲಾಗಿದೆ ಎಂದು ಹಣ ಮಂಜೂರು ಮಾಡಿಸಿಕೊಂಡು, ಖೊಟ್ಟಿ ಬಿಲ್‌ ತೆಗೆಯಲಾಗಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಬೆಳಗಾವಿಯ ವಿಭಾಗ ಮತ್ತು ಉಪವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಈ ಅಪರಾಧ ಕಂಡುಬಂದಿದೆ.

ಏಕಕಾಲಕ್ಕೆ ವಿವಿದೆಡೆ ದಾಳಿ

ಇಲ್ಲಿನ ಹಿಂಡಲಗಾದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ, ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್‌ನಲ್ಲಿರುವ ಶಂಭುಲಿಂಗಪ್ಪ ಅವರ ಮನೆ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನ್ಯಾಷನಲ್ ಪ್ರೊಜೆಕ್ಟ್ ಕನ್‍ಸ್ಟ್ರಕ್ಷನ್ ಕಾರ್ಪೊರೇಶನ್ ಲಿಮಿಟೆಡ್‌ ಕಚೇರಿ, ವಿಜಯಪುರದ ಗಿರಿಮಲ್ಲಪ್ಪ ಜೋಗೂರ ಅವರ ಮನೆ, ಬಾಗಲಕೋಟೆ ಜಿಲ್ಲೆಯ ಮುಧೋಳದ ಕಿರಣ ಹೊಸಕೋಟಿ ಅವರ ಮನೆ, ಬೆಲ್‌ಕೆರೂರಿನ  ರಿಂದನಗೌಡ ಶೇಖರಗೌಡ ಪಾಟೀಲ ಮನೆ ಮೇಲೂ ಏಕಕಾಲಕ್ಕೆ ದಾಳಿ ಮಾಡಲಾಯಿತು ಎಂದು ತನಿಖಾಧಿಕಾರಿ ಇನ್‌ಸ್ಪೆಕ್ಟರ್‌ ವೆಂಕಟೇಶ ಯಡಹಳ್ಳಿ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !