ಹೊಸದಿಗಂತ ವರದಿ ಹುಬ್ಬಳ್ಳಿ:
ಇತ್ತೀಚೆಗೆ ನಡೆದ ಪಂಚಮಸಾಲಿ ಪೀಠಗಳ ವಿವಾದಗಳ ಪರಿಹರಿಸುವುದು ಹಾಗೂ ಸಮಾಜ ಒಗ್ಗೂಡಿಸುವ ಉದ್ದೇಶದಿಂದ ಪಂಚಮಸಾಲಿ ಲಿಂಗಾಯತ ಸಮಾಜದ ಮುಖಂಡರು ನಗರದಲ್ಲಿ ಸುದೀರ್ಘ ಸಭೆ ನಡೆಸಿದರು.
ಹರಿಹರ ಪೀಠ ವಿವಾದದ ಕುರಿತು ಚರ್ಚೆ
ಬುಧವಾರ ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬೆಳಿಗ್ಗೆ 12 ಗಂಟೆಯಿಂದ ಸಂಜೆ 4.30 ರ ವರೆಗೂ ಸಭೆ ನಡೆಯಿತು. ಇತ್ತೀಚೆಗೆ ಹರಿಹರ ಪೀಠದ ಕುರಿತು ನಡೆದ ವಿವಾದಗಳು, ಲೆಕ್ಕ ಪತ್ರ ನೀಡುವುದು, ಮುಂದೆ ಸಮಾಜವನ್ನು ಯಾವ ರೀತಿ ಒಗ್ಗಟಿನಿಂದ ಕೊಂಡಯ್ಯುವುದು ಎಂಬುವುದರ ಕುರಿತು ಚರ್ಚೆ ನಡೆದಿದೆ.
ಈ ಕುರಿತು ಚರ್ಚಿಸುವಾಗ ಮುಖಂಡರ ಮಧ್ಯೆ ಪರಸ್ಪರ ಮಾತಿನ ಚಕಮುಖಿ ಹಾಗೂ ವಾಗ್ವಾದ ನಡೆಯಿತು ಎನ್ನಲಾಗಿದೆ. ಗೌಪ್ಯ ಸಭೆಯ ಕುರಿತು ಮಾತನಾಡಿದ ಶಾಸಕರು, ಮಾಜಿ ಶಾಸಕರು ಹಾಗೂ ಸಮಾಜದ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದರು.
10 ಜನರ ಸಮಿತಿ ರಚನೆ ಘೋಷಣೆ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾಜಿ ಸಚಿವ ಮುರಗೇಶ ನಿರಾಣಿ ಮಾತನಾಡಿ, ಪಂಚಮಸಾಲಿ ಲಿಂಗಾಯತ ಸಮಾಜದ ಪೀಠಗಳಲ್ಲಿ ಉಂಟಾದ ಗೊಂದಲಗಳ ನಿವಾರಣೆಗೆ 10 ಜನ ರಾಜಕೀಯೇತರ ಮುಖಂಡರ ಕಮಿಟಿ ರಚನೆ ಮಾಡುತ್ತಿದ್ದು, ಈ ಮೂಲಕ ಸತ್ಯಾಸತ್ಯೆಗಳನ್ನು ಅರಿತು ಸಮಸ್ಯೆ ಪರಿಹರಿಸಲಾಗುವುದು. ಈ ಬಗ್ಗೆ ಎರಡು ಪೀಠದವರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಯಾವುದೇ ಭಿನ್ನಾಪ್ರಾಯಗಳು ಇರುವುದಿಲ್ಲ. ಲೆಕ್ಕಪತ್ರದ ಬಗ್ಗೆ ಸಮಸ್ಯೆಗಳು ಇವೆ. ಎಲ್ಲ ಲೆಕ್ಕಪತ್ರಗಳನ್ನು ಎರಡು ಪೀಠದವರು ಇಲ್ಲಿ ತಂದಿದ್ದಾರೆ. ಅವುಗಳನ್ನು ಪರಿಶೀಲಿಸುತ್ತೇವೆ. ಹಂತ ಹಂತವಾಗಿ ಸಭೆಗಳನ್ನು ಮಾಡಿ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:
ಪಂಚಮಸಾಲಿ ಸಮಾಜಕ್ಕೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಪೀಠಗಳನ್ನು ಮಾಡಲಾಗಿದೆ. ಪೀಠಗಳಲ್ಲಿ ಕೆಲವೊಂದು ಗೊಂದಲಗಳು ಮನಸ್ತಾಪಗಳು ಬಂದಿವೆ. ಹೀಗಾಗಿ ನಾವು ಪಕ್ಷಾತೀತವಾಗಿ ಸೇರಿ ಇಂದು ಸಭೆ ಮಾಡಿದ್ದೇವೆ ಎಂದರು.
ಸಮಾಜ ಒಗ್ಗಟ್ಟಿಗೆ ಒತ್ತು
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಮಾಜಕ್ಕೆ ಧಕ್ಕೆ ಬರುವಂತಹ ಕೆಲವೊಂದು ಅಹಿತಕರ ಘಟನೆಗಳು ಇತ್ತೀಚೆಗೆ ನಡೆದಿವೆ. ಈ ಹಿನ್ನೆಲೆ ಸಮಾಜದ ಹಿರಿಯರೆಲ್ಲರೂ ಸೇರಿ ಈ ವಿವಾದಗಳನ್ನು ಪರಿಹರಿಸಲು ಸಭೆ ನಡೆಸಿದ್ದೇವೆ. ಈಗಾಗಲೇ ಪಂಚಮಸಾಲಿ ಪೀಠದ ಎರಡು ಕಡೆಯ ಮುಖಂಡರು ಮುಂದೆ ಯಾವ ರೀತಿ ಸಾಗಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಪೀಠದಲ್ಲಿ ಸ್ವಲ್ಪ ಲೆಕ್ಕಪತ್ರದ ಬಗ್ಗೆ ಕೆಲವೊಂದು ಆರೋಪಗಳು, ಪ್ರತ್ಯಾರೋಪಗಳು ನಿರಂತರವಾಗಿ ಕೇಳಿಬಂದಿದ್ದವು. ಇದೀಗ ನಾವು ಪಾರದರ್ಶಕವಾಗಿ ಲೆಕ್ಕಪತ್ರದ ಬಗ್ಗೆ, ಯಾರು ಯಾರು ಹಣ ನೀಡಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ, ಎಲ್ಲ ಲೆಕ್ಕಪತ್ರದ ಬಗ್ಗೆ ಏನು ಗೊಂದಲಗಳಿವೆ ಅವುಗಳನ್ನು ನಿವಾರಿಸಿಕೊಳ್ಳುತ್ತೇವೆ. ಸಮಾಜ ಒಗ್ಗೂಡಿ ಹೋಗುವ ನಿಟ್ಟಿನಲ್ಲಿ ಮುಂದೆ ಏನೇನು ಮಾಡಬೇಕು ಎಂಬ ಬಗ್ಗೆ ಸಮಾಜದ ಮುಂಖಡರ ಮಾರ್ಗದರ್ಶನದಲ್ಲಿ ಮುನ್ನೆಡೆಯುವ ಬಗ್ಗೆ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಸಿ.ಸಿ. ಪಾಟೀಲ, ಅರುಣಕುಮಾರ ಇತರರು ಇದ್ದರು.



